ನವದೆಹಲಿ: ಸುಮಾರು 10 ವರ್ಷಗಳ ನಂತರ ದೆಹಲಿಯಲ್ಲಿ ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದು ನಡೆಯುತ್ತಿದೆ. ಒಲಿಂಪಿಕ್ಸ್ ಹಾಕಿ ಕಂಚಿನ ಪದಕ ವಿಜೇತ ಭಾರತ ತಂಡವು ಬುಧವಾರ ಇಲ್ಲಿ ನಡೆಯುವ ಎರಡು ಟೆಸ್ಟ್‌ಗಳ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದೆ.
ಒಂದು ಕಾಲದಲ್ಲಿ ಹಾಕಿಯ ‘ಆಧ್ಯಾತ್ಮಿಕ ತವರು’ ಎನಿಸಿಕೊಂಡಿದ್ದ ಇಲ್ಲಿಯ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ10 ವರ್ಷಗಳಿಂದ ಒಂದೂ ಅಂತರರಾಷ್ಟ್ರೀಯ ಪಂದ್ಯ ನಡೆದಿಲ್ಲ. 2014ರಲ್ಲಿ ಹೀರೊ ವಿಶ್ವ ಲೀಗ್ ಫೈನಲ್ ಇಲ್ಲಿ ನಡೆದ ಕೊನೆಯ ಪ್ರಮುಖ ಪಂದ್ಯ.
ಈಗ ವಿಶ್ವದ ಎರಡನೇ ಕ್ರಮಾಂಕದ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ತಂಡದ ವಿರುದ್ಧ ಪಂದ್ಯವು ಈ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಕಿ ಪುನರಾಗಮನಕ್ಕೆ ಪರಿಪೂರ್ಣ ವೇದಿಕೆಯಾಗಿದೆ. ಸರಣಿಯ ಎರಡನೇ ಪಂದ್ಯವು ಗುರುವಾರ ನಡೆಯಲಿದೆ.
ಆತಿಥೇಯ ತಂಡದಲ್ಲಿ ಕೆಲವು ಹೊಸ ಮುಖಗಳಿವೆ. ಅವರ ಸತ್ವಪರೀಕ್ಷೆಯ ಜೊತೆಗೆ ಜರ್ಮನಿ ವಿರುದ್ಧ ಆಗಸ್ಟ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ ತಂಡವಿದೆ. ತೀವ್ರ ಹೋರಾಟ ಕಂಡ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಬಳಗ 2–3 ರಿಂದ ಜರ್ಮನಿಗೆ ಸೋತಿತ್ತು.
ಭಾರತಕ್ಕೆ ಸೇಡು ತೀರಿಸಲು ಇದು ಅವಕಾಶವಾದರೂ, ಜರ್ಮನಿ ತಂಡವನ್ನು ಮಣಿಸುವುದು ಸುಲಭದ ಕೆಲಸವೇನಲ್ಲ. ಒಲಿಂಪಿಕ್ಸ್ ಸ್ವರ್ಣ ಪದಕದ ಪಂದ್ಯದಲ್ಲಿ ಅದು ಹಾಲೆಂಡ್ ಎದುರು ಶೂಟ್‌ಔಟ್‌ನಲ್ಲಷ್ಟೇ ಮಣಿದಿತ್ತು. ರ್‍ಯಾಂಕಿಂಗ್ ಪ್ರಕಾರ ಜರ್ಮನಿ ಪಂದ್ಯ ಗೆಲ್ಲುವ ನೆಚ್ಚಿನ ತಂಡ. ಭಾರತ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ ಇವೆರಡು ತಂಡಗಳ ನಡುವಣ ಕೊನೆಯ ಐದು ಮುಖಾಮುಖಿಗಳಲ್ಲಿ ಭಾರತದ ಸಾಧನೆ ಉತ್ತಮವಾಗಿದ್ದು ಮೂರು ಗೆದ್ದು, ಎರಡು ಸೋತಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಂತರ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಉಳಿಸಿಕೊಂಡಿದೆ. ಕ್ರೆಗ್ ಫುಲ್ಟನ್ ಗರಡಿಯಲ್ಲಿರುವ ಹಾಲಿ ತಂಡದಲ್ಲಿ ಅನುಭವಿಗಳ ಜೊತೆ ಯುವ ಮುಖಗಳಿವೆ. ತಂಡಕ್ಕೆ ಗಮನಾರ್ಹ ಸೇರ್ಪಡೆ ಎಂದರೆ ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್. ಕಿರಿಯ ವಾಲಿಬಾಲ್ ಆಟಗಾರ್ತಿಗೆ ಕಿರುಕುಳ ನೀಡಿದ ಪ್ರಕರಣದಿಂದ ದೋಷಮುಕ್ತರಾದ ಮೇಲೆ ಅವರು ತಂಡಕ್ಕೆ ಮರಳಿದ್ದಾರೆ.
ಉತ್ತಮ ಲಯದಲ್ಲಿರುವ ಹರ್ಮನ್‌ಪ್ರೀತ್ ತಂಡದ ಸಾರಥ್ಯ ವಹಿಸಿದ್ದು, ಮಿಡ್‌ಪೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಉಪನಾಯಕರಾಗಿದ್ದಾರೆ. ಒಲಿಂಪಿಕ್ಸ್ ವೇಳೆ ಗಾಯಾಳಾಗಿದ್ದ ಹಾರ್ದಿಕ್ ಸಿಂಗ್ ಇನ್ನೂ ಚೇತರಿಸಿಕೊಂಡಿಲ್ಲ.
ಮಿಡ್‌ಫೀಲ್ಡರ್ ರಾಜಿಂದರ್ ಸಿಂಗ್ ಮತ್ತು ಮುಂಚೂಣಿ ಆಟಗಾರ ಆದಿತ್ಯ ಅರ್ಜುನ್ ಲಾಲಗೆ ಅವರು ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕ್ರಿಶನ್ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೇರಾ ಅವರು ಗೋಲ್ ಕೀಪರ್‌ಗಳಾಗಿದ್ದಾರೆ. ಇಬ್ಬರೂ ಚೀನಾದ ಹುಲುನ್‌ಬುಯಿರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು.
ಭಾರತ ತಂಡಕ್ಕೆ ವರುಣ್ ವಾಪಸ್
ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ ಖುಲಾಸೆಗೊಂಡ ಹಾಕಿ ಆಟಗಾರ ವರುಣ್ ಕುಮಾರ್ ಮತ್ತೆ ಭಾರತ ಹಾಕಿ ತಂಡಕ್ಕೆ ವಾಪಸಾಗಿದ್ದಾರೆ. ಇದೇ 23 ಮತ್ತು 24ರಂದು ಜರ್ಮನಿ ವಿರುದ್ಧ ನಡೆಯುವ ಹಾಕಿ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಲೈಂಗಿಕ ದೌರ್ಜನ್ಯದ ಆರೋಪಕ್ಕೆ ತುತ್ತಾಗಿ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದ ಡಿಫೆಂಡರ್ ವರುಣ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಲಾಗಿದೆ.
ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವ ವಹಿಸಲಿರುವ ತಂಡದಲ್ಲಿ ಕರ್ನಾಟಕದ ಮೊಹಮದ್ ರಾಹೀಲ್ ಕೂಡಾ ಸ್ಥಾನ ಪಡೆದಿದ್ದಾರೆ.
ತಂಡ ಹೀಗಿದೆ: ಗೋಲ್‌ಕೀಪರ್: ಕ್ರಿಷನ್ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ. ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾರ್, ಸಂಜಯ್, ಸುಮಿತ್, ನೀಲಂ ಸಂದೀಪ್. ಮಿಡ್‌ಫೀಲ್ಡರ್: ವಿವೇಕ್ ಸಾಗರ್ ಪ್ರಸಾದ್ (ಉಪನಾಯಕ), ಮನ್‌ಪ್ರೀತ್ ಸಿಂಗ್, ವಿಷ್ಣುಕಾಂತ್ ಸಿಂಗ್, ನೀಲಕಂಠ ಶರ್ಮಾ, ಶಂಷೇರ್ ಸಿಂಗ್, ಮೊಹಮ್ಮದ್ ರಾಹೀಲ್ ಮೌಸೀನ್, ರಾಜಿಂದರ್ ಸಿಂಗ್. ಫಾರ್ವರ್ಡ್ಸ್: ಮನದೀಪ್ ಸಿಂಗ್, ಅಭಿಷೇಕ್, ಸುಖಜೀತ್ ಸಿಂಗ್, ಆದಿತ್ಯ ಅರ್ಜುನ್, ದಿಲ್‌ಪ್ರೀತ್ ಸಿಂಗ್, ಶಿಲಾನಂದ ಲಾಕ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.