ಭುವನೇಶ್ವರ: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಶನಿವಾರ ಇಂಗ್ಲೆಂಡ್ ಸವಾಲು ಎದುರಿಸಲಿದೆ.
ಪ್ರವಾಸಿ ತಂಡದ ಎದುರು ಎರಡು ಪಂದ್ಯಗಳನ್ನು ಆಡಲಿದ್ದು, ಎರಡನೇ ಹಣಾಹಣಿಯು ಭಾನುವಾರ ನಡೆಯಲಿದೆ.
ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡವು ಸದ್ಯ ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಂಡದ ಬಳಿ 16 ಪಾಯಿಂಟ್‌ಗಳಿವೆ. ಜರ್ಮನಿ (16 ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದೆ.
ಅಮಿತ್ ರೋಹಿದಾಸ್ ಅವರು ಭಾರತ ತಂಡದ ನಾಯಕತ್ವ ವಹಿಸಿದ್ದಾರೆ.
ಪ್ರತಿ ಪಂದ್ಯದಲ್ಲೂ ಭಾರತದ ಬ್ಯಾಕ್‌ಲೈನ್ ವಿಭಾಗದ ಮೇಲೆ ಒತ್ತಡ ಬೀಳುತ್ತಿರುವುದರಿಂದ ಡಿಫೆನ್ಸ್ ವಿಭಾಗದ ಕುರಿತು ಕಳವಳ ಹೆಚ್ಚಾಗಿದೆ.
‘ಪಂದ್ಯದಿಂದ ಪಂದ್ಯಕ್ಕೆ ತಂಡವನ್ನು ಬಲಿಷ್ಠವಾಗಿಸುವುದು ನಮ್ಮ ಪ್ರಮುಖ ಗುರಿ. ಪಂದ್ಯದ ಕೊನೆಯ ಹಂತದಲ್ಲಿ ಎಡವುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು. ಹೆಚ್ಚು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಂತಾಗಬೇಕು‘ ಎಂದು ಭಾರತ ತಂಡದ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ತಂಡದ ಫಾರ್ವರ್ಡ್ ವಿಭಾಗವು ಪರಿಣಾಮಕಾರಿಯಾಗಿದೆ. ಎಂಟು ಪಂದ್ಯಗಳಿಂದ 42 ಗೋಲುಗಳನ್ನು ಗಳಿಸಿದ್ದು ಇದಕ್ಕೆ ಸಾಕ್ಷಿ. ಮನದೀಪ್ ಸಿಂಗ್ ಈ ವಿಭಾಗದ ಶಕ್ತಿಯಾಗಿದ್ದಾರೆ. ಮನ್‌ಪ್ರೀತ್ ಸಿಂಗ್ ನೇತೃತ್ವದ ಮಿಡ್‌ಫೀಲ್ಡಿಂಗ್‌ನಲ್ಲಿ ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ ಮತ್ತು ಸುಮಿತ್ ಇದ್ದಾರೆ.
ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ 3–1ರಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.
ಇಂಗ್ಲೆಂಡ್ ತಂಡವು ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿದೆ. ಹೊಸ ನಾಯಕ ಟಾಮ್ ಸೊರ್ಸ್‌ಬೈ ನೇತೃತ್ವದಲ್ಲಿ ಆತಿಥೇಯ ತಂಡದ ಸವಾಲಿಗೆ ಸಜ್ಜಾಗಿದೆ.
ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್
ಭಾರತ 4
ಇಂಗ್ಲೆಂಡ್ 7
ಪ್ರೊ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಸ್ಥಾನ
* ಭಾರತ -2
* ಇಂಗ್ಲೆಂಡ್ -7
ಪಂದ್ಯ ಆರಂಭ: ರಾತ್ರಿ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.