ADVERTISEMENT

ವಿಶ್ವಕಪ್ ಮಹಿಳಾ ಜೂನಿಯರ್ ಹಾಕಿ: ಜರ್ಮನಿ ಎದುರು ಭಾರತಕ್ಕೆ ಸೋಲು

ಏಜೆನ್ಸೀಸ್
Published 1 ಡಿಸೆಂಬರ್ 2023, 13:46 IST
Last Updated 1 ಡಿಸೆಂಬರ್ 2023, 13:46 IST
<div class="paragraphs"><p>ಹಾಕಿ </p></div>

ಹಾಕಿ

   

ಸ್ಯಾಂಟಿಯಾಗೊ (ಚಿಲಿ): ಭಾರತ ತಂಡ, ಎಫ್‌ಐಎಚ್‌ ಮಹಿಳೆಯರ ಜೂನಿಯರ್ ಹಾಕಿ ವಿಶ್ವಕಪ್‌ ಟೂರ್ನಿಯ ತೀವ್ರ ಹೋರಾಟದ ಪಂದ್ಯದಲ್ಲಿ ಗುರುವಾರ 3–4 ಗೋಲುಗಳಿಂದ ಕಳೆದ ಬಾರಿಯ ರ‌ನ್ನರ್‌ ಅಪ್‌ ಜರ್ಮನಿಗೆ ಶರಣಾಯಿತು.

ಭಾರತ ಪರವಾಗಿ ಅನ್ನು (11ನೇ ನಿಮಿಷ), ರೋಪ್ನಿ ಕುಮಾರಿ (14ನೇ) ಮತ್ತು ಮುಮ್ತಾಜ್‌ ಖಾನ್ (24ನೇ) ಗೋಲು ಬಾರಿಸಿದರೆ,  ಸೋಫಿಯಾ ಶ್ವಾಬೆ (17ನೇ), ಲಾರಾ ಪ್ಲುತ್ (21ನೇ, 36ನೇ ನಿ) ಮತ್ತು ಕ್ಯಾರೊಲಿನ್ ಸೀಡೆಲ್ (32ನೇ) ಅವರ ಗೋಲುಗಳ ನೆರವಿನಿಂದ ಜರ್ಮನಿ ಗೆಲುವು ದಾಖಲಿಸಿತು. 

ADVERTISEMENT

ಮೊದಲ ಕ್ವಾರ್ಟರ್‌ನಲ್ಲಿ ಚುರುಕಿನ ಪಾಸಿಂಗ್‌ ಮೂಲಕ ಭಾರತ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ಜರ್ಮನಿಯ ರಕ್ಷಣಾ ಕೋಟೆಗೆ ಪದೇಪದೇ ಲಗ್ಗೆಯಿಟ್ಟಿತು. ಸತತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಪಡೆದುಕೊಂಡಿತು. ಎರಡನೇ ಅವಕಾಶದಲ್ಲಿ ಅನ್ನು ಅವರು ಚೆಂಡು ಅನ್ನು ಗುರಿ ಸೇರಿಸಿದರು. ಸ್ವಲ್ಪ ಸಮಯದ ಬಳಿಕ ರೋಪ್ನಿ ಕುಮಾರಿ ಅಂತರ ಹೆಚ್ಚಿಸಿದರು. 

ಎರಡನೇ ಕ್ವಾರ್ಟರ್‌ನಲ್ಲಿ ಜರ್ಮನಿ ಆಟಗಾರ್ತಿಯರು ಉತ್ತಮ ಆಟ ಪ್ರದರ್ಶಿಸಿದರು. ಸೋಫಿಯಾ ಮತ್ತು ಲಾರಾ ತಲಾ ಒಂದು ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಪ್ರತಿಯಾಗಿ ಭಾರತ ಪರ ಮುಮ್ತಾಜ್  ಅವರು ಎದುರಾಳಿ ತಂಡದ ಗೋಲು ಕೀಪರ್ ಕಣ್ತಪ್ಪಿಸಿ ಗೋಲು ಗಳಿಸಿದರು. ವಿರಾಮದ ವೇಳೆಗೆ ಭಾರತ 3–2 ರಿಂದ ಮುನ್ನಡೆ ಕಾಯ್ದುಕೊಂಡಿತು.

ಮೂರನೇ ಕ್ವಾರ್ಟರ್‌ನಲ್ಲಿ ಜರ್ಮನಿಯ ಲಾರಾ ಅವರು ಮತ್ತೊಂದು ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿದರು. ಪೆನಾಲ್ಟಿ ಕಾರ್ನರ್‌ನಲ್ಲಿ ದೊರೆತ ಅವಕಾಶವನ್ನು ಕ್ಯಾರೊಲಿನ್ ಸದುಪಯೋಗಪಡಿಸಿ ಜರ್ಮನಿಗೆ ಮುನ್ನಡೆ ಒದಗಿಸಿದರು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಆಕ್ರಮಕಾರಿಯಾಗಿ ಆಡಿದವು. ಆದರೆ, ಭಾರತದ ಆಟಗಾರ್ತಿಯರ ಸತತ ಪ್ರಯತ್ನದ ಹೊರತಾಗಿಯೂ ಜರ್ಮನಿ 4–3 ಮುನ್ನಡೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇನ್ನೊಂದೆಡೆ ಜರ್ಮನಿ, ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ಕೆಲವು ಅವಕಾಶಗಳನ್ನು ಪಡೆಯಿತು. ಆದರೆ ಭಾರತದ ಗೋಲ್‌ಕೀಪರ್ ಮಾಧುರಿ ಕಿಂಡೊ ಅವರು ಎದುರಾಳಿ ತಂಡಕ್ಕೆ ಅವಕಾಶ ನೀಡಲಿಲ್ಲ.

ಆಟದ ಕೊನೆ ಕ್ಷಣಗಳಲ್ಲಿ ದೊರೆತ ಸತತ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲುಗಳಾಗಿ ಪರಿವರ್ತಿಸಲು ಭಾರತ ವಿಫಲವಾಯಿತು. ನಾಲ್ಕನೇ ಕ್ವಾರ್ಟರ್ ಗೋಲುಗಳಿಲ್ಲದೆ ಮುಕ್ತಾಯವಾಯಿತು.

ಭಾರತ ತಂಡ ಶನಿವಾರ ನಡೆಯಲಿರುವ ತನ್ನ ಮೂರನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.