ಹುಲುನ್‌ಬುಯಿರ್ (ಚೀನಾ): ಅಮೋಘ ಲಯದಲ್ಲಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್ ಸೋಮವಾರ ಎರಡು ಗೋಲುಗಳನ್ನು ಗಳಿಸಿ, ಭಾರತ ತಂಡ ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4–1 ರಿಂದ ಜಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಲ್ಲಿನ ‘ಮೋಕಿ ಹಾಕಿ ತರಬೇತಿ ನೆಲೆ’ಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಉತ್ತಮ್ ಸಿಂಗ್ (13ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (19, 45ನೇ ನಿಮಿಷ) ಮತ್ತು ಜರ್ಮನ್‌ಪ್ರೀತ್ ಸಿಂಗ್ (32ನೇ ನಿಮಿಷ) ಗೋಲುಗಳನ್ನು ಗಳಿಸಿದರು. ಕೊರಿಯಾ ತಂಡದ ಏಕೈಕ ಗೋಲು 33ನೇ ನಿಮಿಷ ಯಾಂಗ್ ಜಿಹುನ್ ಮೂಲಕ ದಾಖಲಾಯಿತು.
ಭಾರತ, ಮಂಗಳವಾರ ನಡೆಯುವ ಫೈನಲ್‌ನಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸಲಿದೆ. ಚೀನಾ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿ ಫೈನಲ್ ತಲುಪಿತ್ತು.
ಪಾಕಿಸ್ತಾನವು ಮೂರನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.
ಇದೇ ವೇಳೆ ಐದು–ಆರನೇ ಸ್ಥಾನಕ್ಕೆ ನಡೆದ ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಜಪಾನ್ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಮಲೇಷ್ಯಾ ಮೇಲೆ ಜಯಗಳಿಸಿತು. ನಿಗದಿ ಅವಧಿಯಲ್ಲಿ ಸ್ಕೋರ್ 4–4 ಆಗಿತ್ತು.
ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಆರಂಭದಿಂದಲೇ ದಾಳಿಗಳ ಮೂಲಕ ಕೊರಿಯಾ ರಕ್ಷಣೆಯನ್ನು ಪದೇಪದೇ ಪರೀಕ್ಷಿಸಿತು. ರಕ್ಷಣೆಗೇ ಹೆಚ್ಚುಹೊತ್ತು ನೀಡಿದ ಕೊರಿಯಾ ಆಗೊಮ್ಮೆ–ಈಗೊಮ್ಮೆ ದಾಳಿ ನಡೆಸಿತಷ್ಟೇ.
ಭಾರತಕ್ಕೆ ಕೊನೆಗೂ 13ನೇ ನಿಮಿಷ ಯಶಸ್ಸು ಒಲಿಯಿತು. ಬಲಗಡೆಯಿಂದ ನಡೆದ ದಾಳಿಯಲ್ಲಿ ಅರಿಜಿತ್ ಸಿಂಗ್ ಹುಂಡಲ್ ಅವರು ಒದಗಿಸಿದ ಪಾಸ್‌ನಲ್ಲಿ ಉತ್ತಮ್ ಅವರು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ನೀಡಿದರು.
ಎರಡನೇ ಕ್ವಾರ್ಟರ್‌ನಲ್ಲಿ ಕೊರಿಯಾಕ್ಕೆ ಬೇಗನೇ ಎರಡು ಪೆನಾಲ್ಟಿ ಅವಕಾಶಗಳು ದೊರೆತವು. ಆದರೆ ಅದು ಈ ಆವಕಾಶಗಳಲ್ಲಿ ಯಶಸ್ಸು ಪಡೆಯಲಿಲ್ಲ. ನಾಲ್ಕು ನಿಮಿಷಗಳ ನಂತರ ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ಹರ್ಮನ್‌ಪ್ರೀತ್, ಪೆನಾಲ್ಟಿ ಕಾರ್ನರ್‌ಅನ್ನು ಗೋಲಾಗಿ ಪರಿವರ್ತಿಸಿದರು. ಇದು ಅವರಿಗೆ ಟೂರ್ನಿಯಲ್ಲಿ ಆರನೇ ಗೋಲು ಎನಿಸಿತು. ವಿರಾಮಕ್ಕೆ ಕೆಲವೇ ಕ್ಷಣಗಳಿರುವಂತೆ ಕೊರಿಯಾ ಆಟಗಾರರೊಬ್ಬರ ಉತ್ತಮ ಯತ್ನವನ್ನು ಗೋಲ್‌ಕೀಪರ್ ಸೂರಜ್ ಕರ್ಕೇರಾ ತಡೆದರು.
ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಸುಮೀತ್ ಅವರ ‘ಸ್ಕೂಪ್’ನಲ್ಲಿ ದೊರೆತ ಚೆಂಡನ್ನು ಜರ್ಮನ್‌ಪ್ರೀತ್ ಸಿಂಗ್ ನಿಯಂತ್ರಿಸಿ, ಗೋಲಿನೊಳಕ್ಕೆ ಕಳುಹಿಸಿದರು. ಇದೇ ಅವಧಿಯಲ್ಲಿ ಕೊರಿಯಾ ಹಿನ್ನಡೆ ತಗ್ಗಿಸಿತು. ಯಾಂಗ್ ಜಿಹುನ್ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಈ ಗೋಲು ಗಳಿಸಿದರು. ಇದು ಟೂರ್ನಿಯಲ್ಲಿ ಅವರ ಪಾಲಿಗೆ ಎಂಟನೇ ಗೋಲು.
ವಿಚಲಿತವಾದ ಭಾರತ ಆಕ್ರಮಣಕಾರಿ ಆಟ ಮುಂದುವರಿಸಿತು. ಮತ್ತೊಂದು ಪೆನಾಲ್ಟಿಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಗೋಲು ಗಳಿಸಿ ಮುನ್ನಡೆಯನ್ನು 4–1ಕ್ಕೆ ಏರಿಸಿದರು.
ಪಂದ್ಯ ಮುಗಿಯಲು ಎಂಟು ನಿಮಿಷಗಳಿರುವಾಗ ಸೂರಜ್ ಕರ್ಕೇರಾ, ಪಾರ್ಕ್ ಚಿಯೊಲಿಯನ್ ಅವರ ಉತ್ತಮ ಗೋಲು ಯತ್ನವನ್ನು ತಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.