ಹ್ಯೂಸ್ಟನ್: ಉತ್ತಮ ಸಾಮರ್ಥ್ಯ ತೋರಿದ ಭಾರತದ ಮಹಿಳಾ ಡಬಲ್ಸ್ ಮತ್ತು ಮಿಶ್ರ ವಿಭಾಗದ ತಂಡಗಳು ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿವೆ.
ಮಹಿಳಾ ಡಬಲ್ಸ್‌ನ 16ರ ಘಟ್ಟದ ಸೆಣಸಾಟದಲ್ಲಿ ಶುಕ್ರವಾರ, ಕರ್ನಾಟಕದಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಜೋಡಿಯು 11-4, 11-9, 6-11, 11-7ರಿಂದ ಹಂಗರಿಯ ಡೋರಾ ಮದಾರಜ್ ಮತ್ತು ಜಾರ್ಜಿನಾ ಪೋಟಾ ಅವರನ್ನು ಪರಾಭವಗೊಳಿಸಿದರು.
ಐತಿಹಾಸಿಕ ಪದಕ ಗೆಲ್ಲಲು ಭಾರತದ ಆಟಗಾರ್ತಿಯರಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದವರಿಗೂ ಕಂಚಿನ ಪದಕ ನೀಡಲಾಗುತ್ತದೆ.
ಎಂಟರಘಟ್ಟದಲ್ಲಿ ಭಾರತದ ಜೋಡಿಗೆ ಲಕ್ಸೆಂಬರ್ಗ್‌ನ ಸಾರಾ ಡಿ ನಟ್ ಮತ್ತು ಜಿಯಾ ಲಿಯನ್ ನೀ ಅವರ ಸವಾಲು ಎದುರಾಗಿದೆ.
ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಹಾಗೂ ಜಿ.ಸತ್ಯನ್ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕಾ–ಚೀನಾ ಜೋಡಿಯಾದ ಕ್ಯಾನಲ್ ಜ್ಯಾ ಹಾಗೂ ವಾಂಗ್ ಮಾನ್ಯೂ ಎದುರು ಗೆದ್ದು ಎಂಟರಘಟ್ಟ ಪ್ರವೇಶಿಸಿದರು.
ಮೊದಲ ಎರಡು ಗೇಮ್‌ಗಳಲ್ಲಿ ಸೋತ ಭಾರತದ ಜೋಡಿಯು ನಂತರ ಪುಟಿದೆದ್ದು 15-17, 10-12, 12-10, 11-6 11-7ರಿಂದ ಜಯ ಒಲಿಸಿಕೊಂಡಿತು.
ಮಣಿಕಾ ಹಾಗೂ ಸತ್ಯನ್ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಹರಿಮೊಟೊ ತೊಮೊಕಾಜು ಮತ್ತು ಹಯಾತಾ ಹೀನಾ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ಅರ್ಚನಾ ಹಾಗೂ ಶರತ್ ಕಮಲ್ ಜೋಡಿಯು 16ರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್‌ನ ಜಿಯಾ ನ್ಯಾನ್ ಯುವಾನ್– ಇಮ್ಯಾನ್ಯುಯೆಲ್ ಲೆಬೆಸೆನ್ ಎದುರು ಎಡವಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.