ಕಠ್ಮಂಡು: ದಕ್ಷಿಣ ಏಷ್ಯಾ ಕ್ರೀಡಾಕೂಟದ ಆರನೇ ದಿನವಾದ ಶನಿವಾರ ಭಾರತದ ಈಜು ಹಾಗೂ ಕುಸ್ತಿಪಟುಗಳು ಪಾರಮ್ಯ ಮೆರೆದರು. ಇದರೊಂದಿಗೆ ಭಾರತ 110 ಚಿನ್ನಗಳೊಂದಿಗೆ ಕ್ರೀಡಾಕೂಟದಲ್ಲಿ ಪದಕಗಳ ದ್ವಿಶತಕ ದಾಟಿದೆ.
ಶನಿವಾರ ಭಾರತ 49 ಪದಕಗಳನ್ನು ಗೆದ್ದಿತು. ಇದರಲ್ಲಿ 29 ಚಿನ್ನ ಸೇರಿವೆ. ಒಟ್ಟು 214 (110 ಚಿನ್ನ, 69 ಬೆಳ್ಳಿ, 35 ಕಂಚು) ಪದಕಗಳೊಂದಿಗೆ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 142 (43 ಚಿನ್ನ, 34 ಬೆಳ್ಳಿ, 65 ಕಂಚು) ಪದಕಗಳನ್ನು ಗೆದ್ದಿರುವ ಆತಿಥೇಯ ನೇಪಾಳ ಎರಡನೇ ಸ್ಥಾನದಲ್ಲಿದೆ.
ಈಜು ಸ್ಪರ್ಧೆಯಲ್ಲಿ ಕನ್ನಡಿಗರಾದ ಶ್ರೀಹರಿ ನಟರಾಜ್ (100 ಮೀ. ಬ್ಯಾಕ್‌ಸ್ಟ್ರೋಕ್), ಲಿಖಿತ್ ಎಸ್.ಪಿ. (50 ಮೀ. ಬ್ಯಾಕ್‌ಸ್ಟ್ರೋಕ್) ಚಿನ್ನದ ಪದಕ ಗೆದ್ದರು. ರಿಚಾ ಮಿಶ್ರಾ (800 ಮೀ. ಫ್ರೀಸ್ಟೈಲ್), ಶಿವಾ ಎಸ್. (400 ಮೀ, ವೈಯಕ್ತಿಕ ಮೆಡ್ಲೆ), ಮಾನಾ ಪಟೇಲ್ (100 ಮೀ. ಬ್ಯಾಕ್‌ಸ್ಟ್ರೋಕ್), ಚಾಹತ್ ಅರೋರಾ (50 ಮೀ. ಬ್ಯಾಕ್‌ಸ್ಟ್ರೋಕ್), ರುಜುತಾ ಭಟ್ (50 ಮೀ. ಫ್ರೀಸ್ಟೈಲ್) ಅವರಿಗೂ ಚಿನ್ನ ಒಲಿಯಿತು. ಒಟ್ಟು 7 ಚಿನ್ನ, ಒಂದು ಬೆಳ್ಳಿ ಹಾಗೂ ಕಂಚು ಗೆದ್ದರು.ಕುಸ್ತಿಪಟುಗಳು ಸಹ ಉತ್ತಮ ಸಾಮರ್ಥ್ಯ ತೋರಿ ಗಮನಸೆಳೆದರು. ಶನಿವಾರ ನಾಲ್ಕು ಚಿನ್ನ ಗೆದ್ದರು. ಸತ್ಯವ್ರತ್ ಕಡಿಯಾನ್ (ಪುರುಷರ 97 ಕೆಜಿ ಫ್ರೀಸ್ಟೈಲ್), ಸುಮಿತ್ ಮಲಿಕ್ (125 ಕೆಜಿ ಫ್ರೀಸ್ಟೈಲ್), ಗುರ್ಷನ್‌ಪ್ರೀತ್ ಕೌರ್ (ಮಹಿಳೆಯರ 76 ಕೆಜಿ ವಿಭಾಗ) ಸರಿತಾ ಮೋರ್ (57 ಕೆಜಿ ವಿಭಾಗ) ಚಿನ್ನದ ನಗು ಬೀರಿದರು.ಶೂಟರ್‌ಗಳು ಕೂಡ ನಿಖರ ಗುರಿಯೊಂದಿಗೆ ಮುನ್ನುಗ್ಗಿದರು. ಅನೀಶ್ ಭಾನವಾಲ (ಪುರುಷರ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್) ವೈಯಕ್ತಿಕ ವಿಭಾಗ ಮತ್ತು ಭಾಬೇಶ್ ಶೆಖಾವತ್ ಹಾಗೂ ಆದರ್ಶ್ ಸಿಂಗ್ ಜೊತೆಗೂಡಿ ತಂಡ ವಿಭಾಗದಲ್ಲಿ ಚಿನ್ನದ ಕಿರೀಟ ಧರಿಸಿದರು. 10 ಮೀ. ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಮೆಹುಲಿ ಘೋಷ್ ಹಾಗೂ ಯಶ್ ವರ್ಧನ್ ಅವರಿಗೂ ಚಿನ್ನ ಒಲಿಯಿತು.
ಭಾರತದ ವೇಟ್‌ಲಿಫ್ಟರ್‌ಗಳು ಶನಿವಾರ ಎರಡು ಚಿನ್ನ ತಮ್ಮದಾಗಿಸಿಕೊಂಡರು. ಶಾರಸ್ತಿ ಸಿಂಗ್ ಹಾಗೂ ಅನಿರುದ್ಧಾ ಅವರು ಕ್ರಮವಾಗಿ ಮಹಿಳೆಯರ 81 ಹಾಗೂ 87 ಕೆಜಿ ವಿಭಾಗಗಳಲ್ಲಿ ಅಗ್ರಸ್ಥಾನ ಗಳಿಸಿದರು.
ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಎಂಟು ಪದಕಗಳನ್ನು ಗೆದ್ದರೂ ಒಂದು ಚಿನ್ನ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.