ರೂರ್ಕೆಲಾ: ಭಾರತ ಪುರುಷರ ಹಾಕಿ ತಂಡವು ಐಎಚ್‌ಎಫ್ ಪ್ರೊ ಲೀಗ್ ಟೂರ್ನಿಯಲ್ಲಿ ಬುಧವಾರ ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರಮಾನ್ಯ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಭುವನೇಶ್ವರ ಲೆಗ್‌ನಲ್ಲಿ ಭಾರತದ ಆಟಗಾರರು ನೆದರ್ಲೆಂಡ್ಸ್ ವಿರುದ್ಧ ಶೂಟೌಟ್‌ನಲ್ಲಿ 4–2 ಗೋಲುಗಳಿಂದ (ನಿಗದಿ ಅವಧಿಯ ಆಟದಲ್ಲಿ 2–2) ಜಯ ಸಾಧಿಸಿದ್ದರು. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಇಲ್ಲೂ ಡಚ್ ತಂಡದ ವಿರುದ್ಧ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ನೆದರ್ಲೆಂಡ್ಸ್ ತಂಡವು ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.
ಭಾರತ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಶೂಟೌಟ್‌ನಲ್ಲಿ 8–7 ಗೋಲುಗಳಿಂದ (ನಿಗದಿ ಅವಧಿಯ ಆಟದಲ್ಲಿ 2–2) ಸೋಲಿಸಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಅದೇ ದಿನ ನಡೆದ ಮತ್ತೊಂದು ಪಂದ್ಯದಲ್ಲಿ ಡಚ್ ತಂಡ 2–1 ರಿಂದ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು.
ಭಾರತ ತಂಡವು ಐದು ಪಂದ್ಯಗಳಿಂದ 10 ಅಂಕ ಸಂಪಾದಿಸಿ ಪ್ರೊ ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ 9 ಪಂದ್ಯಗಳಿಂದ 18 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಅರ್ಜೆಟೀನಾ (13) ಮತ್ತು ಆಸ್ಟ್ರೇಲಿಯಾ (12) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.