ADVERTISEMENT

ಮಹಿಳಾ ಹಾಕಿ ಏಷ್ಯನ್‌ ಚಾಂಪಿಯನ್ಸ್‌: ಭಾರತಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 23:30 IST
Last Updated 10 ನವೆಂಬರ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಜಗಿರ್‌, ಒಡಿಶಾ: ಮುಂದಿನ ಒಲಿಂಪಿಕ್‌ ಕೂಟದ ಪ್ರವೇಶದ ಮೇಲೆ ಕಣ್ಣಿಟ್ಟಿರುವ ಭಾರತ ಮಹಿಳಾ ಹಾಕಿ ತಂಡವು ಸೋಮವಾರ ಇಲ್ಲಿ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಹಾಲಿ ಚಾಂಪಿಯನ್ ಭಾರತ ತಂಡವು ತವರಿನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದೆ. 

ಆತಿಥೇಯ ತಂಡವು ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ ಕೆಳಗಿರುವ ಮಲೇಷ್ಯಾ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಭಾರತ ತಂಡವು ಈವರೆಗೆ ಏಳು ಆವೃತ್ತಿಗಳಲ್ಲಿ ಆಡಿದೆ. ಅದರಲ್ಲಿ 2016 (ಸಿಂಗಪುರ) ಮತ್ತು 2023 (ರಾಂಚಿ) ಚಾಂಪಿಯನ್‌ ಆಗಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಸೋಲುಗಳನ್ನೇ ಹೆಚ್ಚು ಅನುಭವಿಸಿದೆ. ಅದರಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿಲ್ಲ. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ 16 ಪಂದ್ಯಗಳ ಪೈಕಿ 13ರಲ್ಲಿ ಸೋತಿದೆ. ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳುವ ಛಲದಲ್ಲಿ ತಂಡವಿದೆ.  

ADVERTISEMENT

ಈ ಬಾರಿ ಕಣಕ್ಕಿಳಿಯಲಿರುವ ಸಲೀಮಾ ಟೆಟೆ ನಾಯಕತ್ವದ ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರ್ತಿಯರು ಇದ್ದಾರೆ. ಸ್ಟ್ರೈಕರ್ ನವನೀತ್ ಕೌರ್ ಉಪನಾಯಕಿಯಾಗಿದ್ದಾರೆ. ಟೂರ್ನಿಯಲ್ಲಿ ಭಾರತಕ್ಕೆ ಬಹಳ ಕಠಿಣ ಸ್ಪರ್ಧೆ ಎದುರಾಗಲಿದೆ. ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ತಂಡ ಚೀನಾ, ಜಪಾನ್, ಕೊರಿಯಾ ಮತ್ತು ಥಾಯ್ಲೆಂಡ್ ತಂಡಗಳ ಸವಾಲನ್ನು ಸಲೀಮಾ ಬಳಗವು ಎದುರಿಸಲಿದೆ. 

ರಕ್ಷಣಾ ವಿಭಾಗದಲ್ಲಿ ಉದಿತಾ ಜ್ಯೋತಿ, ಇಶಿಕಾ ಚೌಧರಿ, ಸುಶೀಲಾ ಚಾನು ವೈಷ್ಣವಿ ವಿಠ್ಠಲ್‌ ಫಾಲ್ಕೆ ಇದ್ದಾರೆ. ಮಿಡ್‌ ಫೀಲ್ಡ್ ವಿಭಾಗದಲ್ಲಿ  ಸಲೀಮಾ,  ನೇಹಾ, ಶರ್ಮಿಳಾ ದೇವಿ, ಮನೀಷಾ ಚೌಹಾಣ್‌, ಸುನೆಲಿತಾ ಟೊಪ್ಪೊ, ಲಾಲ್‌ರೆಮಸಿಯಾಮಿ ಇದ್ದಾರೆ. ಫಾರ್ವರ್ಡ್‌ ವಿಭಾಗದಲ್ಲಿ ನವನೀತ್‌ ಕೌರ್‌, ಸಂಗೀತಾಕುಮಾರಿ, ದೀಪಿಕಾ, ಪ್ರೀತಿ ದುಬೆ, ಡಂಗ್‌ ಡಂಗ್‌ ಬ್ಯೂಟಿ ಅವರ ಮೇಲೆ ಭರವಸೆ ಇದೆ. ಅನುಭವಿ ಗೋಲ್‌ಕೀಪರ್ ಸವಿತಾ ಅವರ ಮುಂದೆ ಗುರುತರ ಜವಾಬ್ದಾರಿ ಇದೆ. 

‘ಇತ್ತೀಚಿನ ವೈಫಲ್ಯಗಳಿಂದ ಪಾಠ ಕಲಿತಿರುವ ತಂಡವು ಮುಂಬರುವ ವಿಶ್ವಕಪ್‌ ಮತ್ತು ಒಲಿಂಪಿಕ್ಸ್‌ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಪಯಣಕ್ಕೆ ಅಣಿಯಾಗಿದೆ. ಅದರಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಮಹತ್ವದ್ದಾಗಿದೆ‘ ಎಂದು ತಂಡದ ಮುಖ್ಯ ಕೋಚ್‌ ಹರೇಂದ್ರ ಸಿಂಗ್‌ ತಿಳಿಸಿದ್ದಾರೆ. 

ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಚೀನಾ ಕೂಡ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ದಕ್ಷಿಣ ಕೊರಿಯಾ ಮೂರು ಬಾರಿ ಪ್ರಶಸ್ತಿ ಗೆದ್ದರೆ ಜಪಾನ್‌ ವನಿತೆಯರು ಎರಡು ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಪಂದ್ಯಗಳ ಆರಂಭ: ಮಧ್ಯಾಹ್ನ 12.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.