ADVERTISEMENT

ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಸೆಮಿಫೈನಲ್: ಭಾರತ ಗೆಲ್ಲುವ ನೆಚ್ಚಿನ ತಂಡ

ಪಿಟಿಐ
Published 18 ನವೆಂಬರ್ 2024, 14:30 IST
Last Updated 18 ನವೆಂಬರ್ 2024, 14:30 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ರಾಜಗೀರ್‌ (ಬಿಹಾರ): ಆತ್ಮವಿಶ್ವಾಸದಿಂದ ಆಡುತ್ತಿರುವ ಮತ್ತು ಅಜೇಯವಾಗಿರುವ ಭಾರತ ತಂಡ, ಮಂಗಳವಾರ ನಡೆಯುವ ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ADVERTISEMENT

‌ಆತಿಥೇಯ ತಂಡವುಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ, ರೌಂಡ್ ರಾಬಿನ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಇದೇ ಜಪಾನ್ ತಂಡವನ್ನು 3–0 ಯಿಂದ ಸೋಲಿಸಿತ್ತು. ಸಹಜವಾಗಿ ಸೆಮಿಫೈನಲ್ ಪಂದ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ, ಇದುವರೆಗೆ ಆಡಿದ ಐದೂ ಪಂದ್ಯಗಳಲ್ಲಿ ಜಯಗಳಿಸಿದೆ. ಇದರಲ್ಲಿ ಹಾಲಿ ಒಲಿಂಪಿಕ್‌ ಬೆಳ್ಳಿ ವಿಜೇತ ಚೀನಾ ತಂಡದ ಎದುರು 3–0 ಗೆಲುವೂ ಸೇರಿದೆ.

ತಂಡವು ಇದೇ ರೀತಿಯ ಆಟಕ್ಕೆ ಒತ್ತು ನೀಡುವ ಅಗತ್ಯವನ್ನು ಚೀಫ್ ಕೋಚ್ ಹರೇಂದ್ರ ಸಿಂಗ್‌ ಒತ್ತಿಹೇಳಿದರು. ‘ನಮಗೆ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವು ಇದೆ. ತಂಡ ಯಾವುದರಲ್ಲಿ ಪ್ರಬಲವಾಗಿದೆಯೊ ಆ ಕಡೆ ಲಕ್ಷ್ಯ ವಹಿಸುತ್ತೇವೆ. ತಂಡ ಆಕ್ರಮಣ ಮತ್ತು ರಕ್ಷಣೆ ಎರಡರ ಸಮ್ಮಿಶ್ರಣ’ ಎಂದು ಹೇಳಿದರು.

‘ಇದುವರೆಗೆ ಆಟಗಾರ್ತಿಯರು ಯೋಜನೆಗೆ ಬದ್ಧರಾಗಿ ಆಡಿದ್ದಾರೆ. ನಿರ್ಧಾರಕ್ಕೆ ಬರುವ ಅವರ ರೀತಿಯ ಬಗ್ಗೆ ತೃಪ್ತಿಯಿದೆ. ಆದರೆ ಸೆಮಿಫೈನಲ್ ಇತರ ಪಂದ್ಯಗಳಂತಲ್ಲ’ ಎಂದು ಹರೇಂದ್ರ ಹೇಳಿದರು.

‘ಪಂದ್ಯದಲ್ಲಿ ಅಲಕ್ಷ್ಯ ಭಾವ ನುಸುಳದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಒಂದು ಸಣ್ಣ ಲೋಪ ಕೂಡ ಪ್ರಶಸ್ತಿ ಉಳಿಸಿಕೊಳ್ಳುವ ಕನಸನ್ನು ಛಿದ್ರಗೊಳಿಸಬಲ್ಲದು’ ಎಂದು ಅವರು ಹರೇಂದ್ರ ಎಚ್ಚರಿಕೆಯ ಮಾತುಗಳನ್ನಾಡಿದರು.

ರೌಂಡ್‌ರಾಬಿನ್ ಲೀಗ್‌ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ತಲುಪಿವೆ. ಚೀನಾ ತಂಡವು ಮಂಗಳವಾರ ನಡೆಯುವ ಇನ್ನೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯಾ ಎದುರು ಆಡಲಿದೆ.

ಲೀಗ್ ಹಂತದಲ್ಲಿ ಭಾರತ, ಜಪಾನ್ ತಂಡವನ್ನು ಸುಲಭವಾಗಿ ಸೋಲಿಸಿರಬಹುದು. ಆದರೆ ಹರೇಂದ್ರ ಅವರು, ನಾಕೌಟ್ ಪಂದ್ಯದಲ್ಲಿ ಎದುರಾಳಿಯನ್ನು ಹಗುರವಾಗಿ ಪರಿಗಣಿಸುವ ಯೋಚನೆಯಲ್ಲಿಲ್ಲ.

‌‘ನಿಜ, ಜಪಾನ್‌ ತಂಡದಿಂದ ನಾವು ಕಠಿಣ ಹೋರಾಟದ ನಿರೀಕ್ಷೆಯಲ್ಲಿದ್ದೇವೆ. ಅವರಿಂದ ಪ್ರತಿರೋಧ ಎದುರಾಗುವುದು ಖಚಿತ. ಅವರ ತಂಡ ಉತ್ತಮವಾಗಿದೆ. ಆದರೆ ನಾವು ಸಾಕಷ್ಟು ಹೋಮ್‌ವರ್ಕ್ ಮಾಡಿದ್ದೇವೆ. ಎದುರಾಳಿಯ ಬಗ್ಗೆ ಯೋಚನೆಗಿಂತ ನಾವು ಹೇಗೆ ಆಡಬೇಕೆಂಬ ಯೋಜನೆಯ ಕಡೆಗಷ್ಟೇ ನಮ್ಮ ಗಮನ ಕೇಂದ್ರೀಕೃತವಾಗಬೇಕು’ ಎದು ಅವರು ಸಲಹೆ ನೀಡಿದರು.

ತಂಡದ ರಕ್ಷಣಾಪಡೆಯ ಪ್ರದರ್ಶನ ಉತ್ತಮವಾಗಿರುವುದು ಉತ್ತೇಜನಕರ ಬೆಳವಣಿಗೆ. ಉದಿತಾ, ಸುಶೀಲಾ ಚಾನು ಮತ್ತು ವೈಷ್ಣವಿ ವಿಠಲ್ ಫಾಲ್ಕೆ ಅವರು ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಗೋಲ್‌ಕೀಪರ್‌ಗಳಾದ ಸವಿತಾ ಪೂನಿಯಾ ಮತ್ತು ಬಿಚು ದೇವಿ ಕರಿಬಮ್ ಅವರಿಗೆ ಸತ್ವಪರೀಕ್ಷೆಯೇ ಎದುರಾಗಿಲ್ಲ. ಇದು ಹರೇಂದ್ರ ಅವರಿಗೆ ಚಿಂತೆಯ ವಿಷಯವೂ ಹೌದು.

ಮೊದಲ ಕೆಲವು ಪಂದ್ಯಗಳಲ್ಲಿ ಪೆನಾಲ್ಟಿ ಕಾರ್ನರ್ ಪರಿವರ್ತನೆಯ ದರ ಕಡಿಮೆಯಿದ್ದುದು ತಂಡದ ಕಳವಳಕ್ಕೆ ಕರಣವಾಗಿತ್ತು. ಆದರೆ ಕೊನೆಯ ಕೆಲವು ಪಂದ್ಯಗಳಲ್ಲಿ ದೀಪಿಕಾ ಮತ್ತು ಮನಿಷಾ ಚೌಹಾನ್ ಅವರು ಆ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದ್ದಾರೆ.

ದಾಳಿಯ ವಿಭಾಗದಲ್ಲಿ ದೀಪಿಕಾ ಗಮನ ಸೆಳೆದಿದ್ದಾರೆ. ಉತ್ತಮ ಡ್ರ್ಯಾಗ್‌ಫ್ಲಿಕರ್ ಎನಿಸಿದ್ದಾರೆ ಕೂಡ. ನಾಲ್ಕು ಫೀಲ್ಡ್‌ ಗೋಲು ಸೇರಿ ಅವರು ಹತ್ತು ಗೋಲುಗಳನ್ನು ಗಳಿಸಿದ್ದಾರೆ. ಐದು ಪೆನಾಲ್ಟಿ ಕಾರ್ನರ್‌ ಪರಿವರ್ತಿಸಿದ್ದಾರೆ. ಒಮ್ಮೆ ‘ಪೆನಾಲ್ಟಿ’ಯಲ್ಲೂ ಗೋಲು ಗಳಿಸಿದ್ದಾರೆ.

ಇತರ ಫಾರ್ವರ್ಡ್‌ಗಳಾದ ಶರ್ಮಿಳಾ ದೇವಿ, ಸಂಗೀತಾ ಕುಮಾರಿ, ಪ್ರೀತಿ ದುಬೆ ಮತ್ತು ಲಾಲ್‌ರೆಮ್ಸಿಯಾನಿ ಕೂಡ ಯಶಸ್ಸಿಗೆ ತಮ್ಮ ಪಾಲು ನೀಡಿದ್ದಾರೆ.

ಮಿಡ್‌ಫೀಲ್ಡ್‌ನಲ್ಲಿ ನಾಯಕಿ ಸಲೀಮಾ ಟೆಟೆ ಅವರು ನೇಹಾ ಗೋಯಲ್, ಉಪನಾಯಕಿ ನವನೀತ್ ಕೌರ್ ಮತ್ತು ಬ್ಯೂಟಿ ಡಂಗ್‌ಡಂಗ್ ಜೊತೆ ಉತ್ತಮ ಸಮನ್ವಯ ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.