ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಭಾರತಕ್ಕೆ ಮಲೇಷ್ಯಾ ಸವಾಲು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 22:30 IST
Last Updated 5 ಆಗಸ್ಟ್ 2023, 22:30 IST
ಹರ್ಮನ್‌ಪ್ರೀತ್‌ ಸಿಂಗ್
ಹರ್ಮನ್‌ಪ್ರೀತ್‌ ಸಿಂಗ್   

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ಮಲೇಷ್ಯಾ ತಂಡವನ್ನು ಎದುರಿಸಲಿರುವ ಭಾರತ ತಂಡ, ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವತ್ತ ಚಿತ್ತ ಹರಿಸಬೇಕಿದೆ.

ಮೊದಲ ಪಂದ್ಯದಲ್ಲಿ ಚೀನಾ ಎದುರು 7–2 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಜಪಾನ್‌ ವಿರುದ್ಧ 1–1 ಗೋಲುಗಳ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 15 ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದ್ದರೂ, ಒಂದನ್ನು ಮಾತ್ರ ಗೋಲಾಗಿ ಪರಿವರ್ತಿಸಿತ್ತು.

ಚೀನಾ ವಿರುದ್ಧ ಆರು ಗೋಲುಗಳನ್ನು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗಳಿಸಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ, ಜಪಾನ್‌ ಎದುರು ತಡಬಡಾಯಿಸಿತ್ತು. ಇದು ಮುಖ್ಯ ಕೋಚ್‌ ಕ್ರೆಗ್‌ ಫುಲ್ಟನ್‌ ಅವರ ಕಳವಳಕ್ಕೂ ಕಾರಣವಾಗಿದೆ.

ADVERTISEMENT

‘ಪೆನಾಲ್ಟಿ ಕಾರ್ನರ್‌ ಸೇರಿದಂತೆ ನಿಮಗೆ ಲಭಿಸುವ ಅವಕಾಶಗಳಲ್ಲಿ ಗೋಲು ಗಳಿಸದಿದ್ದರೆ, ಪ್ರತಿಯೊಬ್ಬ ಕೋಚ್‌ಗೂ ಕಳವಳ ಉಂಟಾಗುವುದು ಸಹಜ’ ಎಂದು ಫುಲ್ಟನ್‌ ಅವರು ಹೇಳಿದ್ದಾರೆ. ಆದ್ದರಿಂದ ಭಾನುವಾರದ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡುವ ಸವಾಲು ಭಾರತದ ಮುಂದಿದೆ.

ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಪಾಕಿಸ್ತಾನ (3–1) ಮತ್ತು ಚೀನಾ (5–1) ತಂಡಗಳ ವಿರುದ್ಧ ದೊರೆತ ಗೆಲುವು ಮಲೇಷ್ಯಾ ತಂಡದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಆತಿಥೇಯರಿಗೆ ಪ್ರಬಲ ಸವಾಲು ಎದುರಾಗುವ ಸಾಧ್ಯತೆಯಿದೆ.

ಇಂದಿನ ಪಂದ್ಯಗಳು

ಚೀನಾ–ಕೊರಿಯಾ (ಆರಂಭ: ಸಂಜೆ 4)

ಪಾಕಿಸ್ತಾನ– ಜಪಾನ್ (ಸಂಜೆ 6.15)

ಭಾರತ– ಮಲೇಷ್ಯಾ (ರಾತ್ರಿ 8.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.