ADVERTISEMENT

ಪ್ಯಾರಾ ಏಷ್ಯನ್‌ ಕ್ರೀಡಾಕೂಟ: ಭಾರತಕ್ಕೆ ಪದಕಗಳ ಶತಕದ ನಿರೀಕ್ಷೆ

ಪಿಟಿಐ
Published 21 ಅಕ್ಟೋಬರ್ 2023, 16:31 IST
Last Updated 21 ಅಕ್ಟೋಬರ್ 2023, 16:31 IST
ಅವನಿ ಲೆಖರಾ
ಅವನಿ ಲೆಖರಾ   

ಹಾಂಗ್‌ಝೌ (ಚೀನಾ): ಏಷ್ಯನ್‌ ಕ್ರೀಡಾಕೂಟದಲ್ಲಿ ದಾಖಲೆಯ 107 ಪದಕಗಳನ್ನು ಗೆದ್ದು ಬೀಗಿದ್ದ ಭಾರತವು, ಅ. 22ರಿಂದ (ಭಾನುವಾರ) 28ರವರೆಗೆ ಇಲ್ಲಿ ನಡೆಯುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ ದಾಖಲೆ ಸಂಖ್ಯೆಯಲ್ಲಿ ಪದಕ ಬಾಚಿಕೊಳ್ಳುವ ವಿಶ್ವಾಸದಲ್ಲಿದೆ.

ಪ್ಯಾರಾ ಶೂಟರ್‌ ಅವನಿ ಲೆಖರಾ ಮತ್ತು ಪ್ಯಾರಾ ಜಾವೆಲಿನ್‌ ಥ್ರೋಪಟು ಸುಮಿತ್ ಅಂತಿಲ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅವನಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರೆ, ಸುಮಿತ್ ಬಂಗಾರದ ಸಾಧನೆ ಮಾಡಿದ್ದರು.

ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಹಾಗೂ ಪ್ಯಾರಾ ಬ್ಯಾಡ್ಮಿಂಟನ್‌ಪಟುಗಳಾದ ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ್ ಸೇರಿದಂತೆ 313 ಅಥ್ಲೀಟ್‌ಗಳು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಒಟ್ಟು 22 ಕ್ರೀಡೆಗಳಲ್ಲಿ 17ರಲ್ಲಿ ಭಾರತದ ಸ್ಪರ್ಧಿಗಳು ಪಾಲ್ಗೊಳ್ಳುವರು. ರೋಯಿಂಗ್, ಕೆನೋಯಿಂಗ್‌, ಲಾನ್‌ಬೌಲ್, ಟೇಕ್ವಾಂಡೊ ಮತ್ತು ಅಂಧರ ಫುಟ್‌ಬಾಲ್‌ ಸ್ಪರ್ಧೆಗಳಲ್ಲಿ ಇದೇ ಮೊದಲ ಬಾರಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.

22 ಕ್ರೀಡೆಗಳ ವಿವಿಧ ವಿಭಾಗಗಳಲ್ಲಿ 566 ಚಿನ್ನದ ಪದಕಗಳಿಗೆ ನಡೆಯುವ ಸ್ಪರ್ಧೆಗಳಲ್ಲಿ 43 ದೇಶಗಳ 4,000ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಪ್ಯಾರಾ ಏಷ್ಯನ್ ಗೇಮ್ಸ್ 2022ರ ಅ.9ರಿಂದ 15ರವರೆಗೆ ನಡೆಯಬೇಕಿತ್ತು. ಕೋವಿಡ್‌–19 ಕಾರಣದಿಂದ ಒಂದು ವರ್ಷ ಮುಂದೂಡಲಾಯಿತು.

ಈವರೆಗೆ ನಡೆದ ಮೂರು ಆವೃತ್ತಿಗಳ ಪದಕ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನ ಕಾಯ್ದುಕೊಂಡಿದೆ. 2018ರ ಆವೃತ್ತಿಯಲ್ಲಿ 172 ಚಿನ್ನ, 88 ಬೆಳ್ಳಿ, 59 ಕಂಚು ಸೇರಿದಂತೆ 319 ಪದಕಗಳನ್ನು ಬಾಚಿಕೊಂಡಿತ್ತು. ಆತಿಥೇಯ ದೇಶವು ಈ ಬಾರಿಯೂ 439 ಕೀಡಾಪಟುಗಳನ್ನು ಕಣಕ್ಕೆ ಇಳಿಸಲಿದೆ.

ಮೊದಲ ಪ್ಯಾರಾ ಏಷ್ಯನ್ ಕ್ರೀಡಾಕೂಟ 2010ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆದಿತ್ತು. ಅಲ್ಲಿ ಭಾರತವು ಒಂದು ಚಿನ್ನ ಸೇರಿದಂತೆ 14 ಪದಕಗಳೊಂದಿಗೆ 15ನೇ ಸ್ಥಾನವನ್ನು ಗಳಿಸಿತ್ತು. 2014ರಲ್ಲೂ 15ನೇ ಸ್ಥಾನ ಪಡೆದಿತ್ತು. ಆದರೆ, 2018ರ ಆವೃತ್ತಿಯಲ್ಲಿ ಭಾರತವು 72 ಪದಕಗಳನ್ನು ಗೆದ್ದುಕೊಂಡು 9ನೇ ಸ್ಥಾನಕ್ಕೆ ಏರಿತ್ತು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ 54 ಕ್ರೀಡಾಪಟುಗಳ ಪೈಕಿ 51 ಮಂದಿ ಹ್ಯಾಂಗ್‌ಝೌನಲ್ಲೂ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ 100 ಪದಕಗಳ ಗಡಿ ಮುಟ್ಟುವ ನಿರೀಕ್ಷೆಯನ್ನು ಭಾರತ ಪ್ಯಾರಾಲಿಂಪಿಕ್ ಸಮಿತಿ ಹೊಂದಿದೆ. 

ಕಳೆದ ಬಾರಿ ಅಥ್ಲೆಟಿಕ್ಸ್‌ನಲ್ಲಿ ಭಾರತವು 36 ಪದಕಗಳನ್ನು (7 ಚಿನ್ನ, 13 ಬೆಳ್ಳಿ, 16 ಕಂಚು) ಚಾಚಿಕೊಂಡಿತ್ತು. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ಕನಿಷ್ಠ 45 ಪದಕಗಳ ನಿರೀಕ್ಷೆಯಿದೆ. ಶೂಟಿಂಗ್‌ ಮತ್ತು ಆರ್ಚರಿ ಸ್ಪರ್ಧೆಗಳಲ್ಲೂ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ.

‘ಈ ಬಾರಿಯ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ನಾವು 100 ಪದಕಗಳ ನಿರೀಕ್ಷೆಯಲ್ಲಿದ್ದೇವೆ’ ಎಂದು ಭಾರತದ ಪ್ಯಾರಾಲಿಂಪಿಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಶರಣ್ ಸಿಂಗ್ ತಿಳಿಸಿದ್ದಾರೆ.

ಪ್ಯಾರಾ ಏಷ್ಯನ್‌ ಗೇಮ್ಸ್‌; ಭಾರತದ ಸಾಧನೆ

ವರ್ಷ;ಚಿನ್ನ;ಬೆಳ್ಳಿ;ಕಂಚು;ಒಟ್ಟು ಪದಕ;ಸ್ಥಾನ

2010;1;4;9;14;15

2014;3;14;16;33;15

2018;15;24;33;72;9

ಸುಮಿತ್‌ ಅಂತಿಲ್‌
Asian Games-patti-22102023.pdf

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.