ADVERTISEMENT

ಒಲಿಂಪಿಕ್ | ಹಾಕಿ ತಂಡದ ಕೈತಪ್ಪಿದ ಫೈನಲ್ ಅವಕಾಶ

ಕಂಚಿನ ಪದಕ ಪಂದ್ಯದಲ್ಲಿ ಭಾರತಕ್ಕೆ ಸ್ಪೇನ್ ಸವಾಲು l ಫೈನಲ್‌ಗೆ ಜರ್ಮನಿ, ನೆದರ್ಲೆಂಡ್ಸ್

ಪಿಟಿಐ
Published 7 ಆಗಸ್ಟ್ 2024, 13:15 IST
Last Updated 7 ಆಗಸ್ಟ್ 2024, 13:15 IST
ಜರ್ಮನಿ ವಿರುದ್ಧದ ಪಂದ್ಯದಲ್ಲಿ ಭಾರತದ ಹಾಕಿ ಆಟಗಾರರು        --–ಎಎಫ್‌ಪಿ ಚಿತ್ರ
ಜರ್ಮನಿ ವಿರುದ್ಧದ ಪಂದ್ಯದಲ್ಲಿ ಭಾರತದ ಹಾಕಿ ಆಟಗಾರರು        --–ಎಎಫ್‌ಪಿ ಚಿತ್ರ   

ಪ್ಯಾರಿಸ್:  ಒಲಿಂಪಿಕ್  ಕೂಟದಲ್ಲಿ 44 ವರ್ಷಗಳ ನಂತರ ಫೈನಲ್‌ಗೆ ಪ್ರವೇಶಿಸುವ ಭಾರತ ತಂಡದ ಕನಸು ಕಮರಿತು. 

ಮಂಗಳವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು 2–3 ಗೋಲುಗಳಿಂದ ಜರ್ಮನಿ ವಿರುದ್ಧ ಸೋತಿತು. ನಾಲ್ಕರ ಘಟ್ಟದ ರೋಚಕ ಹಣಾಹಣಿಯಿಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ (7ನೇ ನಿಮಿಷ) ಹಾಗೂ ಸುಖಜೀತ್ ಸಿಂಗ್ (36ನೇ ನಿ) ಗೋಲು ಗಳಿಸಿದರು. ಜರ್ಮನಿಯ ಗೋಂಜಾಲೊ ಪೀಲತ್ (18ನಿ), ಕ್ರಿಸ್ಟೋಫರ್ ರೂರ್ (27ನೇ ನಿ) ಮತ್ತು ಮಾರ್ಕೊ ಮಿಲ್ಕಾವು (54ನಿ) ಗೋಲು ಹೊಡೆದರು. 

ಈ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಗೋಲಿನ ಖಾತೆ ತೆರೆಯಿತು. ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ವೀರಾವೇಶದಿಂದ ಹೋರಾಡಿ ಗೆದ್ದಿದ್ದ ಭಾರತ ತಂಡವು ಇಲ್ಲಿಯೂ
ಉತ್ತಮ ಆರಂಭ ಪಡೆಯಿತು. ಏಳನೇ ನಿಮಿಷದಲ್ಲಿ ಹರ್ಮನ್‌ ಗೋಲು ಹೊಡೆದು 1–0
ಮುನ್ನಡೆ ಒದಗಿಸಿದರು. 

ADVERTISEMENT

ಇದಾಗಿ ಹನ್ನೊಂದು ನಿಮಿಷಗಳು ಕಳೆದ ನಂತರ ಜರ್ಮನಿಯ ಗೊಂಜಾಲೊ ತಿರುಗೇಟು ನೀಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ
ಗೋಲು ಹೊಡೆದರು.  9 ನಿಮಿಷಗಳ ನಂತರ ಕ್ರಿಸ್ಟೋಫರ್ ಗೋಲು ಹೊಡೆದು ಜರ್ಮನಿಗೆ 2–1 ರ ಮುನ್ನಡೆ ನೀಡಿದರು. ನಂತರದ ಹತ್ತು ನಿಮಿಷ ಉಭಯ ತಂಡಗಳಲ್ಲಿ ಪೈಪೋಟಿ ಮುಗಿಲು ಮುಟ್ಟಿತು. 

ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಸುಖಜೀತ್ ಮೇಲುಗೈ ಸಾಧಿಸಿದರು. ಇದರಿಂದಾಗಿ 2–2ರ ಸಮಬಲವಾಯಿತು. ಮುಂದಿನ 18 ನಿಮಿಷಗಳ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಉಭಯ ತಂಡಗಳ ಆಟಗಾರರೂ ಛಲದ ಆಟವಾಡಿದರು. ಆದರೂ ಗೋಲು ಗಳಿಸುವುದು ಸಾಧ್ಯವಾಗಲಿಲ್ಲ.  

ಆದರೂ ಪಂದ್ಯದ 54ನೇ ನಿಮಿಷದಲ್ಲಿ ಮಾರ್ಕೊ ಕೈಚಳಕ ಮೆರೆದರು.  ಜರ್ಮನಿಗೆ ಮುನ್ನಡೆ ಗಳಿಸಿಕೊಟ್ಟರು. ಕೊನೆಯವರೆಗೂ ಈ  ಅಂತರ ಕಾಪಾಡಿಕೊಂಡ ಜರ್ಮನಿ ಗೆದ್ದು ಫೈನಲ್ ಪ್ರವೇಶಿಸಿತು. 

ಭಾರತ ತಂಡವು ಗುರುವಾರ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.  ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿತ್ತು.

ನೆದರ್ಲೆಂಡ್ಸ್‌ಗೆ ಜಯ: ಇನ್ನೊಂದು ಸೆಮಿಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡವು 4–0ಯಿಂದ ಸ್ಪೇನ್ ವಿರುದ್ಧ ಜಯಿಸಿತು. ನೆದರ್ಲೆಂಡ್ಸ್ ಫೈನಲ್‌ಗೆ ಪ್ರವೇಶಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.