ADVERTISEMENT

ಬ್ಯಾಡ್ಮಿಂಟನ್‌ | ಚೀನಾ ತೈಪೆಗೆ ಮಣಿದ ಭಾರತ

ಪಿಟಿಐ
Published 14 ಮೇ 2023, 11:56 IST
Last Updated 14 ಮೇ 2023, 11:56 IST
ಪಿ.ವಿ.ಸಿಂಧು ಆಟದ ವೈಖರಿ– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು ಆಟದ ವೈಖರಿ– ಎಎಫ್‌ಪಿ ಚಿತ್ರ   

ಸುಜೌ (ಚೀನಾ) : ಪಿ.ವಿ.ಸಿಂಧು ಅವರ ದಿಟ್ಟ ಹೋರಾಟ ಸೋಲಿನೊಂದಿಗೆ ಅಂತ್ಯವಾಗುವುದರೊಂದಿಗೆ ಭಾರತ ಬ್ಯಾಡ್ಮಿಂಟನ್ ತಂಡದವರು ಸುದೀರ್‌ಮನ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚೀನಾ ತೈಪೆ ತಂಡದ ಎದುರು ನಿರಾಸೆ ಅನುಭವಿಸಿದರು.

ಭಾನುವಾರ ನಡೆದ ಟೂರ್ನಿಯ ’ಸಿ‘ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡವು 1–4ರಿಂದ ಸೋತಿತು.

ಮಿಶ್ರ ಡಬಲ್ಸ್‌ನ ಮೊದಲ ಸ್ಪರ್ಧೆಯಲ್ಲಿ ತನಿಶಾ ಕ್ರಾಸ್ತೊ ಹಾಗೂ ಕೆ.ಸಾಯಿ ಪ್ರಣೀತ್ ಜೋಡಿಯು ಉತ್ತಮ ಪೈಪೋಟಿಯನ್ನೇ ನೀಡಿತು. ಆದರೂ ಇವರಿಬ್ಬರು 21-18, 24-26, 6-21ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 30ನೇ ಸ್ಥಾನದಲ್ಲಿರುವ ಯಾಂಗ್‌ ಪೊ ಸುವನ್‌ ಮತ್ತು ಹು ಲಿಂಗ್‌ ಫಾಂಗ್‌ ಎದುರು ಎಡವಿದರು.

ADVERTISEMENT

ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. ಅವರು 19-21, 15-21ರಿಂದ ಚೊ ಟಿಯೆನ್ ಚೆನ್‌ ಎದುರು ಮಣಿದರು. ಇದರೊಂದಿಗೆ ಭಾರತ 0–2ರಿಂದ ಹಿನ್ನಡೆ ಕಂಡಿತು. ಇದಾದ ಬಳಿಕ ಸ್ಪರ್ಧೆಯನ್ನು ಜೀವಂತವಾಗುಳಿಸುವ ಜವಾಬ್ದಾರಿ ಸಿಂಧು ಅವರ ಮೇಲೆ ಇತ್ತು.

ಪಂದ್ಯದ ಮಹಿಳೆಯರ ಸಿಂಗಲ್ಸ್‌ನಲ್ಲಿ ತಮ್ಮ ಪರಿಚಿತ ಎದುರಾಳಿ ತೈ ಜು ಯಿಂಗ್ ಅವರಿಗೆ ಮುಖಾಮುಖಿಯಾದ ಸಿಂಧು, ಜಿದ್ದಾಜಿದ್ದಿ ಪೈಪೋಟಿ ನಡೆಸಿದರು. ಆದರೆ ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತೆ 14–21, 21–18, 17–21ರಿಂದ ಚೀನಾ ತೈಪೆ ಆಟಗಾರ್ತಿಗೆ ಮಣಿದರು.

ಮೊದಲ ಗೇಮ್‌ನಲ್ಲಿ ತೈ ಜು ಹೆಚ್ಚಿನ ಪ್ರಾಬಲ್ಯ ಮೆರೆದರು. ಪುಟಿದೆದ್ದ ಸಿಂಧು, ಎರಡನೇ ಗೇಮ್‌ಅನ್ನು ಕೈವಶ ಮಾಡಿಕೊಂಡರು.

ರಂಗೇರಿದ ಮೂರನೇ ಗೇಮ್‌

ಒಂದು ಹಂತದಲ್ಲಿ 6–6 ಪಾಯಿಂಟ್ಸ್ ಸಮಬಲ ಸಾಗಿದ್ದ ಸ್ಪರ್ಧೆಯಲ್ಲಿ ತೈ ಜು 9–6ರ ಮುನ್ನಡೆ ಸಾಧಿಸಿದರು. ಫೋರ್‌ಹ್ಯಾಂಡ್‌ ಹೊಡೆತಗಳಿಂದ ಗಮನಸೆಳೆದ ಸಿಂಧು 10–10ರಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರೂ ವಿರಾಮದ ವೇಳೆಗೆ ತೈಪೆ ಆಟಗಾರ್ತಿ ಒಂದು ಪಾಯಿಂಟ್‌ ಅಂತರದ ಮೇಲುಗೈ ಸಾಧಿಸಿದರು.

ವಿರಾಮದ ಬಳಿಕವೂ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಮುಂದುವರಿಯಿತು. ಆದರೆ ಕೊನೆಯಲ್ಲಿ ಚುರುಕಿನ ಆಟವಾಡಿದ ತೈ ಜು ಪಂದ್ಯ ಗೆದ್ದುಕೊಂಡರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ 13-21, 21-17, 18-21ರಿಂದ ಲೀ ಯಾಂಗ್‌– ಯೆ ಹಾಂಗ್‌ ವೇ ಎದುರು ಸೋಲು ಕಂಡರು.

ಕೊನೆಯಲ್ಲಿ ಟ್ರಿಸಾ ಜೋಳಿ–ಗಾಯತ್ರಿ ಗೋಪಿಚಂದ್‌ ಮಹಿಳೆಯರ ಡಬಲ್ಸ್‌ನಲ್ಲಿ 21-15, 18-21, 13-21ರಿಂದ ಲೀ ಚಿಯಾ ಸಿನ್ –ತೆಂಗ್‌ ಚುನ್‌ ಸುನ್ ಅವರನ್ನು ಮಣಿಸಿ ಸಮಾಧಾನದ ಜಯ ತಂದುಕೊಟ್ಟರು. ಇದರಿಂದ ಭಾರತ ‘ಕ್ಲೀನ್‌ಸ್ವೀಪ್’ ಆಗುವುದು ತಪ್ಪಿತು.

ಸೋಮವಾರ ನಡೆಯಲಿರುವ ಸಿ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಮಲೇಷ್ಯಾ ಸವಾಲು ಎದುರಿಸಲಿದೆ.

ಎಚ್.ಎಸ್. ಪ್ರಣಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.