ಮಸ್ಕತ್: ಮೊಹಮ್ಮದ್ ರಾಹೀಲ್ ಅವರ ಹ್ಯಾಟ್ರಿಕ್ ಗೋಲುಗಳ ಹೊರತಾಗಿಯೂ ಭಾರತ ತಂಡವು ಎಫ್‌ಐಎಚ್ ಹಾಕಿ ಫೈವ್ಸ್ ಪುರುಷರ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ 4–7ರಿಂದ ನೆದರ್ಲೆಂಡ್ಸ್ ವಿರುದ್ಧ ಪರಾಭವಗೊಂಡಿತು.
ಮಂಗಳವಾರ ನಡೆದ ಪಂದ್ಯದಲ್ಲಿ ರಾಹೀಲ್ (1ನೇ, 7ನೇ ಮತ್ತು 25ನೇ ನಿಮಿಷ) ಮೂರು ಗೋಲು ಗಳಿಸಿ ಮಿಂಚಿದರೆ, ಮನ್‌ದೀಪ್ ಮೋರ್ (11ನೇ) ಒಂದು ಗೋಲು ಗಳಿಸಿದರು.
ನೆದರ್ಲೆಂಡ್ಸ್ ತಂಡದ ಪರ ಸ್ಯಾಂಡರ್ ಡಿವಿಜ್ನ್ (4ನೇ ಮತ್ತು 15ನೇ) ಹಾಗೂ ಅಲೆಕ್ಸಾಂಡರ್ ಸ್ಕೋಪ್ (10ನೇ ಮತ್ತು 26ನೇ) ತಲಾ ಎರಡು ಗೋಲು ಗಳಿಸಿದರೆ, ಲ್ಯೂಕಾಸ್ ಮಿಡೆನ್‌ಡಾರ್ಪ್ (12ನೇ), ಜೇಮೀ ವ್ಯಾನ್ ಆರ್ಟ್ (13ನೇ) ಮತ್ತು ಪೆಪಿಜ್ನ್ ರೆಯೆಂಗಾ ( 20ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಪಂದ್ಯ ಆರಂಭಗೊಂಡ ಕೆಲವೇ ಸೆಕೆಂಡ್‌ನಲ್ಲಿ ರಾಹೀಲ್ ಅವರು ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು. ಅದಾದ ಮೂರೇ ನಿಮಿಷದಲ್ಲಿ ಸ್ಯಾಂಡರ್ ಚೆಂಡನ್ನು ಗುರಿ ಸೇರಿಸಿ ನೆದರ್ಲೆಂಡ್ಸ್ ತಂಡದ ಗೋಲನ್ನು ಸಮಬಲಗೊಳಿಸಿದರು. ಮತ್ತೆ ರಾಹೀಲ್ ಭಾರತಕ್ಕೆ ಮುನ್ನಡೆ ಒದಗಿಸಿದರೂ ಅದು ಹೆಚ್ಚು ಹೊತ್ತು ಉಳಿಯಲಿಲ್ಲ. ನಂತರದಲ್ಲಿ ಎದುರಾಳಿ ತಂಡವು ಪಾರಮ್ಯ ಮೆರೆದು ಜಯಭೇರಿ ಬಾರಿಸಿ ಸೆಮಿಫೈನಲ್ ಪ್ರವೇಶಿಸಿತು.
ನಂತರದಲ್ಲಿ ಐದರಿಂದ ಎಂಟನೇ ಸ್ಥಾನಗಳ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ಭಾರತವು 9–4ರಿಂದ ಕೀನ್ಯಾ ವಿರುದ್ಧ ಜಯ ಸಾಧಿಸಿತು. ಐದು ಮತ್ತು ಆರನೇ ಸ್ಥಾನಕ್ಕಾಗಿ ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ಸೆಣಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.