ನವದೆಹಲಿ: ಭಾರತ ಪುರುಷರ ತಂಡ, ಕಜಕಸ್ತಾನದ ಅಸ್ತಾನದಲ್ಲಿ ನಡೆಯುತ್ತಿರುವ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಸೆಮಿಫೈನಲ್‌ನಲ್ಲಿ ಗುರುವಾರ 0–3 ಅಂತರದಿಂದ ಚೀನಾ ತೈಪೆ ತಂಡಕ್ಕೆ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
ಭಾರತ ಮಹಿಳೆಯರ ತಂಡ ಸಹ ಬುಧವಾರ ಕಂಚಿನ ಪದಕ ಗೆದ್ದುಕೊಂಡಿತ್ತು. ಇದು, ಈ ಚಾಂಪಿಯನ್‌ಷಿಪ್ 1972ರಲ್ಲಿ ಆರಂಭವಾದ ನಂತರ ಭಾರತ ಮಹಿಳೆಯರ ತಂಡ ಗೆದ್ದ ಮೊದಲ ಪದಕವಾಗಿತ್ತು.
ವಿಶ್ವ ಕ್ರಮಾಂಕದಲ್ಲಿ 42ನೇ ಸ್ಥಾನದಲ್ಲಿರುವ ಭಾರತದ ಅನುಭವಿ ಆಟಗಾರ ಅಚಂತ ಶರತ್ ಕಮಲ್ ಅವರು ವಿಶ್ವ ಕ್ರಮಾಂಕದಲ್ಲಿರುವ ಏಳನೇ ಸ್ಥಾನದಲ್ಲಿರುವ ಲಿನ್ ಯುನ್ ಜು ಅವರ ನಿಖರವಾದ ಮತ್ತು ಮಿಂಚಿನ ಹೊಡೆತಗಳ ಮುಂದೆ ಹೆಚ್ಚೇನೂ ಹೋರಾಟ ತೋರಲಾಗಲಿಲ್ಲ. ಶರತ್ ಅವರಿಗೆ ಕುದುರಿಕೊಳ್ಳಲೂ ಅವಕಾಶ ಸಿಗಲಿಲ್ಲ. ಚೀನಾ ತೈಪೆಯ ಆಟಗಾರ 11–7, 12–10, 11–9 ರಲ್ಲಿ ನೇರ ಆಟಗಳಿಂದ ಜಯಗಳಿಸಿದರು.
ಮಾನವ್ ಠಕ್ಕರ್, ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿರುವ ಕಾವೊ ಚೆಂಗ್–ಜುಯಿ ಎದುರು ಹೋರಾಟ ತೋರಿದರೂ ಅಂತಿಮವಾಗಿ ಸೋಲನುಭವಿಸಬೇಕಾಯಿತು. ಚೆಂಗ್ 11–9, 8–11, 11–3, 13–11 ರಲ್ಲಿ ಪಂದ್ಯ ಗೆದ್ದು, ತೈಪೆ ತಂಡಕ್ಕೆ 2–0 ಮುನ್ನಡೆ ಒದಗಿಸಿದರು.
ಮೂರನೇ ಸಿಂಗಲ್ಸ್‌ನಲ್ಲಿ ಹರ್ಮೀತ್ ದೇಸಾಯಿ ಕೂಡ ನಿರಾಸೆ ಅನುಭವಿಸಿದರು. ಹುವಾಂಗ್ ಯಾನ್–ಚೆಂಗ್ 11–6, 11–9, 11–7 ರಿಂದ ಹರ್ಮೀತ್ ಅವರನ್ನು ಸುಲಭವಾಗಿ ಮಣಿಸಿದರು.
‘ಸೋಲಿನ ಹೊರತಾಗಿಯೂ ಭಾರತ ಪುರುಷರ ತಂಡ ಹೆಮ್ಮೆಪಡುವಂಥ ಸಾಧನೆ ಮಾಡಿದೆ. ಏಷ್ಯದ ಪ್ರಬಲ ತಂಡಗಳಿರುವ ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವುದು ಸಣ್ಣ ಸಾಧನೆಯೇನಲ್ಲ’ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.