ನವದೆಹಲಿ: ಯುರೋಪ್‌ನಲ್ಲಿ ಪ್ರೊ ಲೀಗ್ ಹಾಕಿ ಹರ್ಮನ್‌ಪ್ರೀತ್ ಸಿಂಗ್ ಅವರು ಮೇ 22 ರಂದು ಆರಂಭವಾಗುವ ಎಫ್ಐಎಚ್ ಪ್ರೊ ಲೀಗ್‌ನಲ್ಲಿ ಪಾಲ್ಗೊಳ್ಳುವ 24 ಸದಸ್ಯರ ಭಾರತ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ಪ್ರೊ ಲೀಗ್‌ನ ಎರಡು ಲೆಗ್‌ಗಳಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಲಿದೆ. ಆರ್ಜೆಂಟೀನಾ, ಬೆಲ್ಜಿಯಂ, ಜರ್ಮನಿ ಮತ್ತು ಬ್ರಿಟನ್ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಬೆಲ್ಜಿಯಂನ ಆ್ಯಂಟ್‌ವರ್ಪ್‌ನಲ್ಲಿ ಮೊದಲ ಲೆಗ್ ಮೇ 22 ರಿಂದ 30ರವರೆಗೆ ನಡೆಯಲಿದೆ. ಎರಡನೆ ಲೆಗ್ ಜೂನ್ 1 ರಿಂದ 12 ರವರೆಗೆ ಲಂಡನ್‌ನಲ್ಲಿ ನಡೆಯಲಿದೆ.
ಚುರುಕಿನ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ತಂಡದ ಉಪನಾಯಕರಾಗಿದ್ದಾರೆ.
ಜುಲೈ 26ರಂದು ಆರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲು ಭಾರತ ತಂಡದ ಸಿದ್ಧತೆ ಪರಿಶೀಲನೆಗೆ ಈ ಟೂರ್ನಿ ವೇದಿಕೆಯಾಗಲಿದೆ. ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾದಲ್ಲಿ ನಡೆದ ಹಾಕಿ ಸರಣಿಯಲ್ಲಿ ಭಾರತ ತಂಡ 5–0 ಸೋಲು ಅನುಭವಿಸಿತ್ತು. ನಂತರ ಈ ಪ್ರವಾಸ ನಡೆಯುತ್ತಿದೆ.
ಭಾರತ ಪ್ರಸ್ತುತ ಪ್ರೊ ಲೀಗ್‌ನಲ್ಲಿ ಎಂಟು ಪಂದ್ಯಗಳಿಂದ 15 ಪಾಯಿಂಟ್ಸ್ ಸಂಗ್ರಹಿಸಿದ್ದು ಮೂರನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ (12 ಪಂದ್ಯಗಳಿಂದ 26) ಮತ್ತು ಆಸ್ಟ್ರೇಲಿಯಾ (8 ಪಂದ್ಯಗಳಿಂದ 20) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ.
‘ನಾವು ಶಿಬಿರದಲ್ಲಿ ಕಠಿಣ ತರಬೇತಿ ಪಡೆದಿದ್ದೇವೆ. ಪ್ರತಿಯೊಬ್ಬರ ಆಟದ ತಂತ್ರಗಾರಿಕೆಯನ್ನು ಅರ್ಥಮಾಡಿಕೊಂಡಿದ್ದೇವೆ’ ಎಂದು ತಂಡದ ಮುಖ್ಯ ತರಬೇತುದಾರ ಕ್ರೇಗ್ ಫುಲ್ಟನ್ ಹೇಳಿರುವುದಾಗಿ ಹಾಕಿ ಇಂಡಿಯಾ ಪ್ರಕಟಣೆ ತಿಳಿಸಿದೆ.
‘ಪ್ಯಾರಿಸ್ ಒಲಿಂಪಿಕ್ಸ್‌ಗೆ ನಾವು ವಿಶ್ವದ ಅಗ್ರ ತಂಡಗಳ ಜೊತೆ ಆಡಲಿದ್ದೇವೆ. ಇದರಿಂದ ನಮ್ಮ ಆಟದ ಮಟ್ಟ ಎತ್ತರಿಸಲು ಮತ್ತು ಸುಧಾರಿಸಿಕೊಳ್ಳಲು ನೆರವಾಗಲಿದೆ’ ಎಂದಿದ್ದಾರೆ.
ಗೋಲ್‌ಕೀಪರ್ಸ್: ಪಿ.ಆರ್.ಶ್ರೀಜೇಶ್, ಕೃಷನ್ ಬಹಾದ್ದೂರ್ ಪಾಠಕ್. ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಸುಮಿತ್, ಸಂಜಯ್, ಜುಗರಾಜ್ ಸಿಂಗ್, ವಿಷ್ಣುಕಾಂತ್ ಸಿಂಗ್. ಮಿಡ್‌ಫೀಲ್ಡರ್ಸ್: ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಮನ್‌ಪ್ರೀತ್ ಸಿಂಗ್, ಶಂಶೇರ್ ಸಿಂಗ್, ಹಾರ್ದಿಕ್ ಸಿಂಗ್ (ಉಪನಾಯಕ), ರಾಜಕುಮಾರ್ ಪಾಲ್, ಮೊಹಮ್ಮದ್ ರಾಹಿಲ್ ಮೌಸೀನ್.
ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್, ಆಕಾಶದೀಪ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್ ಮತ್ತು ಬಾಬಿ ಸಿಂಗ್ ಧಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.