ನವದೆಹಲಿ: ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ತವರಿನ ಅಂಕಣದಲ್ಲಿ ಪ್ರಶಸ್ತಿ ಜಯಿಸುವ ಆಸೆ ಕೈಗೂಡಲಿಲ್ಲ.
ಭಾನುವಾರ ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಜೋಡಿಯು 21-15, 11-21, 18-21ರಿಂದ ದಕ್ಷಿಣ ಕೊರಿಯಾದ ವಿಶ್ವ ಚಾಂಪಿಯನ್ ಜೋಡಿ ಕಾಂಗ್ ಮಿನ್ ಯುಕ್ ಮತ್ತು ಸಿಯೊ ಸಾಂಗ್ ಜೇ ವಿರುದ್ಧ ಪರಾಭವಗೊಂಡರು.
ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಅವರು ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ಮೊದಲ ಗೇಮ್‌ನಲ್ಲಿ ಗೆದ್ದರು. ಚಿರಾಗ್ ನೆಟ್ ಬಳಿಯ ಆಟದಲ್ಲಿ ಪಾರಮ್ಯ ಮೆರೆದರು. ಸಾತ್ವಿಕ್ ಅಮೋಘವಾದ ರ‍್ಯಾಲಿಗಳನ್ನು ಆಡಿದರು. ಇದರಿಂದಾಗಿ ಒಂದು ಹಂತದಲ್ಲಿ 19–13ರ ಮುನ್ನಡೆ ಸಾಧಿಸಿತು.
ಆದರೆ ನಂತರದ ಎರಡು ಗೇಮ್‌ಗಳಲ್ಲಿ ಕೊರಿಯಾದ ಜೋಡಿ ತಿರುಗೇಟು ನೀಡಿತು. ಎರಡನೇ ಗೇಮ್‌ನಲ್ಲಿ ಚಿರಾಗ್–ಸಾತ್ವಿಕ್ ಉತ್ತಮ ಆರಂಭ ಪಡೆಯಲಿಲ್ಲ. 1–5ರಿಂದ ಹಿನ್ನಡೆ ಅನುಭವಿಸಿತು. ನಂತರ ಚೇತರಿಸಿಕೊಂಡು 5–7ಕ್ಕೆ ಅಂತರ ತಗ್ಗಿಸಿಕೊಂಡಿತು. ನೆಟ್ ಬಳಿಯ ಆಟದಲ್ಲಿ ಸಾತ್ವಿಕ್ ಕೆಲವು ಉತ್ತಮ ಹೊಡೆತಗಳನ್ನು ಪ್ರದರ್ಶಿಸಿದರು. ಇದೇ ಗೇಮ್‌ನಲ್ಲಿ ಚಿರಾಗ್ ಫ್ಲ್ಯಾಟ್ ಎಕ್ಸ್‌ಚೆಂಜ್‌ನಲ್ಲಿ ಮಾಡಿದ ಲೋಪಗಳಿಂದಾಗಿ ಕೊರಿಯಾದ ಅಂಕಗಳ ಖಾತೆ ಹಿಗ್ಗಿತು. ರಕ್ಷಣಾತ್ಮಕ ತಂತ್ರಗಳಲ್ಲಿಯೂ ಮೇಲುಗೈ ಸಾಧಿಸಿದ ಕಾಂಗ್–ಸಿಯೊ ಒಂದು ಹಂತದಲ್ಲಿ 10 ಅಂಕಗಳ ಮುನ್ನಡೆ ಗಳಿಸಿತು. ಇದು ಅವರ ಜಯಕ್ಕೆ ನೆರವಾಯಿತು.
ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಆರಂಭದಲ್ಲಿಯೇ ಕೊರಿಯಾ ಜೋಡಿಯು 9–5 ಮುನ್ನಡೆ ಗಳಿಸಿತು. ಸಾತ್ವಿಕ್–ಚಿರಾಗ್ ಅವರು ತಮ್ಮ ನೈಜ ಆಕ್ರಮಣಶೈಲಿ ಆಟವನ್ನು ಆಡದಂತೆ ಕಾಂಗ್–ಸಿಯೊ ತಡೆಯೊಡ್ಡಿದರು. ಚಿರಾಗ್, ಸಾತ್ವಿಕ್ ಅವರು ಈ ಹಂತದಲ್ಲಿ ಒಂದಿಷ್ಟು ಮರುಹೋರಾಟ ತೋರಿದರೂ ಫಲ ನೀಡಲಿಲ್ಲ.
2022ರಲ್ಲಿ ಇದೇ ಕ್ರೀಡಾಂಗಣದಲ್ಲಿ ಭಾರತದ ಜೋಡಿಯು ಜಯಿಸಿತ್ತು. ಹೋದ ವಾರ ಮಲೇಷ್ಯಾ ಓಪನ್‌ನಲ್ಲಿಯೂ ದ್ವಿತೀಯ ಸ್ಥಾನ ಪಡೆದಿತ್ತು. ಇದುವರೆಗೆ ಕೊರಿಯಾದ ಜೋಡಿಯೊಂದಿಗೆ ಸಾತ್ವಿಕ್ –ಚಿರಾಗ್ ಐದು ಬಾರಿ ಮುಖಾಮುಖಿಯಾಗಿದ್ದಾರೆ. ಕಾಂಗ್ ಮತ್ತು ಸಿಯೊ ಜೋಡಿಯು 4–1ರಿಂದ ಮೇಲುಗೈ ಸಾಧಿಸಿದೆ.
ತೈಜುಗೆ ಪ್ರಶಸ್ತಿ: ಮಹಿಳೆಯರ ಸಿಂಗಲ್ಸ್‌ನಲ್ಲಿ ತೈಪೆಯ ತೈ ಜು ಯೀಂಗ್ ಪ್ರಶಸ್ತಿ ಗೆದ್ದರು. ಅವರು 21–16, 21–12ರ ನೇರ ಗೇಮ್‌ಗಳಲ್ಲಿ ಚೀನಾದ ಚೆನ್ ಯು ಫಿ ವಿರುದ್ಧ ಗೆದ್ದರು.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ಎರಡನೇ ರ‍್ಯಾಂಕಿಂಗ್ ಆಟಗಾರ ಶಿ ಯು ಕೀ 23–21, 21–17ರಿಂದ ಹಾಂಕಾಂಗ್‌ನ ಲೀ ಚೆಕ್ ಯೂ ಅವರ ವಿರುದ್ಧ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.