ADVERTISEMENT

ಉದ್ದೀಪನ ಮದ್ದು ಸೇವನೆ: ಭಾರತಕ್ಕೆ ಮೂರನೇ ಸ್ಥಾನ, ಮೊದಲ ಸ್ಥಾನದಲ್ಲಿ ರಷ್ಯಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:37 IST
Last Updated 21 ಡಿಸೆಂಬರ್ 2021, 13:37 IST
-
-   

ನವದೆಹಲಿ: ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯಲ್ಲಿ ಭಾರತವು ಮೂರನೇ ಸ್ಥಾನಕ್ಕೇರಿದೆ.

ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (ವಾಡಾ) ಪ್ರಕಟಿಸಿರುವ 2019ರ ಪಟ್ಟಿಯಲ್ಲಿ ಭಾರತವು ನಾಲ್ಕರಿಂದ ಮೂರನೇ ಸ್ಥಾನಕ್ಕೆ ಏರಿದೆ. ಈ ಅವಧಿಯಲ್ಲಿ ಒಟ್ಟು 152 ಪ್ರಕರಣಗಳು ವರದಿಯಾಗಿವೆ. ಇದು ವಿಶ್ವದ ಒಟ್ಟು ಪ್ರಕರಣಗಳ ಶೇ 17ರಷ್ಟು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ದೇಹದಾರ್ಢ್ಯ (57) ಪಟುಗಳ ಸಂಖ್ಯೆಯೇ ಹೆಚ್ಚು.

ಒಲಿಂಪಿಕ್ಸ್ ಕ್ರೀಡೆಗಳ ಯಾದಿಯಲ್ಲಿ ವೇಟ್‌ ಲಿಫ್ಟಿಂಗ್ ನಲ್ಲಿ 25, ಅಥ್ಲೆಟಿಕ್ಸ್‌ನಲ್ಲಿ 20 ಮತ್ತು ಕುಸ್ತಿಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಬಾಕ್ಸಿಂಗ್ ಮತ್ತು ಜುಡೊ ಕ್ರೀಡೆಗಳಲ್ಲಿ ತಲಾ ನಾಲ್ಕು ಪ್ರಕರಣಗಳಿವೆ. ನಾಲ್ವರು ಕ್ರಿಕೆಟಿಗರೂ ಈ ಪಟ್ಟಿಯಲ್ಲಿದ್ದಾರೆ.

ADVERTISEMENT

ರಷ್ಯಾ (167) ಮತ್ತು ಇಟಲಿ (157) ಮೊದಲೆರಡು ಸ್ಥಾನಗಳಲ್ಲಿವೆ. ಬ್ರೆಜಿಲ್ (78) ಮತ್ತು ಇರಾನ್ (70) ಕ್ರಮವಾಗಿ ನಾಲ್ಕು ಹಾಗೂಐದನೇ ಸ್ಥಾನದಲ್ಲಿವೆ.ಇದೇ ಕಾರಣಕ್ಕಾಗಿ ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಷ್ಯಾ ತಂಡಕ್ಕೆ ಭಾಗವಹಿಸಲು ಮಾನ್ಯತೆ ನೀಡಿರಲಿಲ್ಲ.

2018ರಲ್ಲಿ ಭಾರತ (107) ನಾಲ್ಕನೇ ಸ್ಥಾನದಲ್ಲಿತ್ತು. ರಷ್ಯಾ (144), ಇಟಲಿ (132) ಮತ್ತು ಫ್ರಾನ್ಸ್‌ (114) ಮೊದಲ ಮೂರು ಸ್ಥಾನಗಳಲ್ಲಿದ್ದವು.

2019ರಲ್ಲಿ ವಿಶ್ವದಾದ್ಯಂತ ವಾಡಾ 2,78,047 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಈ ಪೈಕಿ 2021ರ ಜನವರಿ 31ರವರೆಗೆ ಪರೀಕ್ಷಿಸಲಾದ ಒಟ್ಟು 1535 ಮಾದರಿಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಖಚಿತವಾಗಿದೆ.

ವರ್ಷದಿಂದ ವರ್ಷಕ್ಕೆ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದು ವಾಡಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.