ADVERTISEMENT

2029ರ ವಿಶ್ವ ಅಥ್ಲೆಟಿಕ್ಸ್‌ ಕೂಟದ ಆತಿಥ್ಯಕ್ಕೆ ಭಾರತ ಆಸಕ್ತಿ: ಎಎಫ್‌ಐ

ಪಿಟಿಐ
Published 3 ಡಿಸೆಂಬರ್ 2023, 15:56 IST
Last Updated 3 ಡಿಸೆಂಬರ್ 2023, 15:56 IST
ಅಂಜು ಬಾಬಿ ಜಾರ್ಜ್
ಅಂಜು ಬಾಬಿ ಜಾರ್ಜ್   

ಅಮೃತಸರ: ಭಾರತದಲ್ಲಿ 2029ರ ವಿಶ್ವ ಅಥ್ಲೆಟಿಕ್ಸ್ ಕೂಟ ಆಯೋಜನೆಗಾಗಿ ಬಿಡ್ ಸಲ್ಲಿಸಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ನಿರ್ಧರಿಸಿದೆ.

ಫೆಡರೇಷನ್ ಈ ಹಿಂದೆ 2027ರ ವಿಶ್ವ ಅಥ್ಲೆಟಿಕ್‌ ಕೂಟದ ಆಯೋಜನೆಗೆ ಬಿಡ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈಗ ಅದರಿಂದ ಹಿಂದೆಸರಿದು, ನಂತರದ ಆವೃತ್ತಿಯನ್ನು ಆಯೋಜಿಸುವತ್ತ ಉತ್ಸಾಹ ತೋರಿದೆ.

‘ಹೌದು. 2029ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಬಿಡ್‌ ಹಾಕಲು ಆಸಕ್ತಿ ಹೊಂದಿದ್ದೇವೆ’ ಎಂದು ಎಎಫ್‌ಐ ವಾರ್ಷಿಕ ಮಹಾಸಭೆಯ ಬಳಿಕ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್  ತಿಳಿಸಿದರು.

ADVERTISEMENT

‘2036ರ ಒಲಿಂಪಿಕ್ಸ್ ಮತ್ತು 2030ರ ಯೂತ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತವು ಆಸಕ್ತಿ ತೋರಿದೆ. ಆದ್ದರಿಂದ, 2029ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಿದರೆ ಉತ್ತಮ’ ಎಂದು ಅವರು ಹೇಳಿದರು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಕೊನೆಯ ಆವೃತ್ತಿಯು ಆಗಸ್ಟ್‌ನಲ್ಲಿ ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯಿತು ಮತ್ತು ಮುಂದಿನ ಕೂಟ 2025ರಲ್ಲಿ ಟೋಕಿಯೊದಲ್ಲಿ ನಡೆಯಲಿದೆ.

ಕಾರ್ಯತಂತ್ರ: 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್ ಮಾಡಲು ಭಾರತ ಆಸಕ್ತಿ ವಹಿಸಿರುವುದರಿಂದ ಆ ಕೂಟದ ಅಥ್ಲೆಟಿಕ್ಸ್‌ನಲ್ಲಿ ಕನಿಷ್ಠ 5ರಿಂದ 6 ಪದಕಗಳನ್ನು ಜಯಿಸುವ ಗುರಿಯೊಂದಿಗೆ ಕಾರ್ಯತಂತ್ರ ಯೋಜನೆ ಸಿದ್ಧಪಡಿಸಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ನಿರ್ಧರಿಸಿದೆ.

ಎಎಫ್‌ಐ ಯೋಜನಾ ಆಯೋಗದ ಅಧ್ಯಕ್ಷ ಲಲಿತ್ ಭಾನೋಟ್ ಅವರಿಗೆ ಕಾರ್ಯತಂತ್ರ ಸಿದ್ಧಪಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ವಿವಿಧ ಅಂಶಗಳ ಕುರಿತು ಒಳಹರಿವು ನೀಡಲು ಮೂರು ಸಮಿತಿಗಳನ್ನು ರಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.