ADVERTISEMENT

ಹಾಕಿ: ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಉಳಿಸಿಕೊಂಡ ಭಾರತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 22:18 IST
Last Updated 20 ನವೆಂಬರ್ 2024, 22:18 IST
<div class="paragraphs"><p>ನಿರ್ಣಾಯಕ ಗೋಲು ಗಳಿಸಿದ ದೀಪಿಕಾ (ಬಲಗಡೆ) ಅವರ ಜೊತೆ ಸಂಭ್ರಮ ಹಂಚಿಕೊಳ್ಳಲು ಮುಂದಾದ ಭಾರತದ ಇತರ ಆಟಗಾರ್ತಿಯರು &nbsp;ಪಿಟಿಐ ಚಿತ್ರ</p></div>

ನಿರ್ಣಾಯಕ ಗೋಲು ಗಳಿಸಿದ ದೀಪಿಕಾ (ಬಲಗಡೆ) ಅವರ ಜೊತೆ ಸಂಭ್ರಮ ಹಂಚಿಕೊಳ್ಳಲು ಮುಂದಾದ ಭಾರತದ ಇತರ ಆಟಗಾರ್ತಿಯರು  ಪಿಟಿಐ ಚಿತ್ರ

   

ರಾಜಗೀರ್ (ಬಿಹಾರ), (ಪಿಟಿಐ): ಯುವ ಆಟಗಾರ್ತಿ ದೀಪಿಕಾ ಮತ್ತೊಮ್ಮೆ ಮಿಂಚಿದರು. ಅವರು ಆಕರ್ಷಕ ‘ರಿವರ್ಸ್‌ ಹಿಟ್’ ಮೂಲಕ ಗಳಿಸಿದ ಗೋಲಿನಿಂದ ಭಾರತ 1–0 ಯಿಂದ ಒಲಿಂಪಿಕ್‌ ಬೆಳ್ಳಿ ವಿಜೇತ ಚೀನಾ ತಂಡವನ್ನು ಸೋಲಿಸಿ ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ಫೈನಲ್ ಪಂದ್ಯದ 31ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ದೀಪಿಕಾ ನಿರ್ಣಾಯಕ ಗೋಲನ್ನು ಗಳಿಸಿದರು. ಟೂರ್ನಿಯಲ್ಲಿ 11ನೇ ಗೋಲು ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್  ಗೌರವಕ್ಕೂ ಈ ಆಟಗಾರ್ತಿ ಪಾತ್ರರಾದರು. ಲೀಗ್ ಹಂತದಲ್ಲೂ ಭಾರತ 3–0 ಯಿಂದ ಚೀನಾ ಮೇಲೆ ಜಯಗಳಿಸಿತ್ತು.

ADVERTISEMENT

ಭಾರತಕ್ಕೆ ಇದು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ (ಎಸಿಟಿ) ಮೂರನೇ ಪ್ರಶಸ್ತಿ. ಈ ಹಿಂದೆ 2016ರಲ್ಲಿ ಮತ್ತು 2023ರಲ್ಲಿ ಚಾಂಪಿಯನ್ ಆಗಿತ್ತು. ಚೀನಾ ಮೂರನೇ ಬಾರಿ ರನ್ನರ್ ಅಪ್ ಆಯಿತು.

ಭಾರತ ಮತ್ತು ಚೀನಾ ತಂಡಗಳ ನಡುವೆ ಫೈನಲ್ ಹೋರಾಟದಿಂದ ಕೂಡಿತ್ತು. ಎರಡೂ ತಂಡಗಳು ಆಕ್ರಮಣ, ಪ್ರತಿ ಆಕ್ರಮಣಕ್ಕೆ ಇಳಿದವು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳ ‘ಬ್ಯಾಕ್‌ಲೈನ್‌’ ಬಲಿಷ್ಠವಾಗಿತ್ತು. ಭಾರತದ ಕಡೆ 17 ವರ್ಷ ವಯಸ್ಸಿನ ಸುನೆಲಿಟೊ ಟೊಪ್ಪೊ ಚುರುಕಿನ ಡ್ರಿಬ್ಲಿಂಗ್ ಕೌಶಲದಿಂದ ರಕ್ಷಣೆ ವಿಭಾಗದಲ್ಲಿ ಗಮನಸೆಳೆದರು.

ಎರಡನೇ ಕ್ವಾರ್ಟರ್‌ನಲ್ಲಿ (18ನೇ ನಿಮಿಷ) ಚೀನಾಕ್ಕೆ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಜಿನ್ಜುವಾಂಗ್ ತಾನ್ ಅವರ ಉತ್ತಮ ಪ್ರಯತ್ನವನ್ನು ಭಾರತದ ಎರಡನೇ ಗೋಲ್‌ಕೀಪರ್ ಬಿಚುದೇವಿ ಕರಿಬಮ್ ಅವರು ಅಮೋಘ ಡೈವಿಂಗ್ ಮೂಲಕ ತಡೆದಿದ್ದರು. ಭಾರತ ಮುಂದಿನ ಎರಡು ನಿಮಿಷಗಳಲ್ಲಿ ನಾಲ್ಕು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು. ಇದರಲ್ಲಿ ದೀಪಿಕಾ ಹೆಚ್ಚಿನ ಅವಕಾಶ ಪಡೆದರೂ ಅವೆಲ್ಲ ವ್ಯರ್ಥವಾದವು.

ಮಧ್ಯಂತರದ ಅವಧಿ ಹೀಗೆ ಗೋಲಿಲ್ಲದೇ ಕಳೆಯಿತು.

ಆದರೆ ವಿರಾಮದ ನಂತರ ಭಾರತ ತಂಡಕ್ಕೆ ದೊರೆತ ಐದನೇ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ದೀಪಿಕಾ ತಪ್ಪು ಮಾಡಲಿಲ್ಲ. ಭಾರತಕ್ಕೆ ಈ ಗೋಲು ಉತ್ಸಾಹ ಮೂಡಿಸಿತು. 42ನೇ ನಿಮಿಷ ದೀಪಿಕಾ ಮುನ್ನಡೆ ಹೆಚ್ಚಿಸುವ ಸುವರ್ಣಾವಕಾಶ ಪಡೆದಿದ್ದರು. ತಮ್ಮನ್ನು ಉದ್ದೇಶಪೂರ್ವಕವಾಗಿ ಬೀಳಿಸಿದ್ದಕ್ಕೆ ಅವರಿಗೆ ‘ಪೆನಾಲ್ಟಿ’ ದೊರೆತಿತ್ತು. ಆದರೆ ಅವರ ಯತ್ನವನ್ನು ಚೀನಾ ಗೋಲ್‌ಕೀಪರ್‌ ಲಿ ಟಿಂಗ್‌ ತಡೆದರು.

ಕೆಲ ನಿಮಿಷಗಳ ನಂತರ ಆರನೇ ಪೆನಾಲ್ಟಿ ಕಾರ್ನರ್‌ನಲ್ಲಿ ಸುಶೀಲಾ ಚಾನು ಗೋಲು ಯತ್ನಕ್ಕೂ ಟಿಂಗ್ ಗೋಡೆಯಾದರು. ಇದಾದ ನಂತರ ಸ್ಕೋರ್‌ ಸಮಗೊಳಿಸಲು ಚೀನಾ ಶತಪ್ರಯತ್ನ ನಡೆಸಿದರೂ, ಭಾರತದ ರಕ್ಷಣೆ ಅದಕ್ಕೆ ಅವಕಾಶ ಕೊಡಲಿಲ್ಲ.

ಜಪಾನ್‌ಗೆ 3ನೇ ಸ್ಥಾನ: ಮೂರನೇ ಸ್ಥಾನ ನಿರ್ಧಾರಕ್ಕೆ ನಡೆದ ಪಂದ್ಯದಲ್ಲಿ ಜಪಾನ್ 4–1 ರಿಂದ ಮಲೇಷ್ಯಾ ತಂಡವನ್ನು ಸೋಲಿಸಿತು.

ತಲಾ ₹10 ಲಕ್ಷ ಬಹುಮಾನ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತದ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ತಲಾ ₹10 ಲಕ್ಷ ನಗದು ಬಹುಮಾನ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ. ಮುಖ್ಯ ಕೋಚ್ ಹರೇಂದ್ರ ಸಿಂಗ್ ಅವರಿಗೆ ₹10 ಲಕ್ಷ ಬಹುಮಾನ ಮತ್ತು ನೆರವು ಸಿಬ್ಬಂದಿಗೆ ತಲಾ ₹5 ಲಕ್ಷ ನೀಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.