ADVERTISEMENT

Paris Olympics 2024 | ಆರ್ಚರಿ: ಐತಿಹಾಸಿಕ ಸಾಧನೆಯ ನಿರೀಕ್ಷೆ

ಆರ್ಚರಿ ಮಹಿಳೆಯರ ರಿಕರ್ವ್‌ ತಂಡದ ಪದಕ ಸುತ್ತಿನ ಹಣಾಹಣಿ ಇಂದು

ಪಿಟಿಐ
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ಭಾರತದ ಅಂಕಿತಾ ಭಕತ್</p></div>

ಭಾರತದ ಅಂಕಿತಾ ಭಕತ್

   

-ಪಿಟಿಐ ಚಿತ್ರ

ಪ್ಯಾರಿಸ್‌: ಭಾರತ ಪುರುಷರ ಮತ್ತು ಮಹಿಳೆಯರ ಆರ್ಚರಿ ರಿಕರ್ವ್‌ ತಂಡಗಳು ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಭಾನುವಾರ ಮಹಿಳಾ ತಂಡಗಳ ಪದಕ ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಭಾರತಕ್ಕೆ ಆರ್ಚರಿಯಲ್ಲಿ ಐತಿಹಾಸಿಕ ಒಲಿಂಪಿಕ್ಸ್‌ ಪದಕದ ನಿರೀಕ್ಷೆ ಹೆಚ್ಚಿಸಿದೆ.

ADVERTISEMENT

1988ರ ಸೋಲ್‌ ಒಲಿಂಪಿಕ್ಸ್‌ನಿಂದ ಭಾರತದ ಬಿಲ್ಗಾರರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಈತನಕ ಪದಕ ಒಲಿದಿಲ್ಲ. 38 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಲು ಅವರು ಕಾತರದಿಂದ ಇದ್ದಾರೆ.

12 ವರ್ಷಗಳ ಬಳಿಕ ಮೊದಲ ಬಾರಿ ಸಂಪೂರ್ಣ ಆರು ಮಂದಿಯ ಭಾರತದ ಆರ್ಚರಿ ತಂಡವು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದೆ. ಈ ಆರು ಮಂದಿ ಮಿಶ್ರ ತಂಡ, ಪುರುಷರ ಮತ್ತು ಮಹಿಳೆಯರ ತಂಡ ಹಾಗೂ ವೈಯಕ್ತಿಕ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ಅವರ ಅಮೋಘ ಗುರಿಯಿಂದಾಗಿ ಅರ್ಹತಾ ಸುತ್ತಿನಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದೊಂದಿಗೆ ನೇರವಾಗಿ ಎಂಟರ ಘಟ್ಟ ಪ್ರವೇಶಿಸಿವೆ. ಚೊಚ್ಚಲ ಪದಕಕ್ಕಾಗಿ ಇನ್ನು ಎರಡು ಸುತ್ತಿನ ಗೆಲುವಿನ ಅಗತ್ಯವಿದೆ.

ಭಾರತದ ಆರ್ಚರಿ ತಂಡವು ಒಲಿಂಪಿಕ್ಸ್‌ನಲ್ಲಿ ಈತನಕ ಕ್ವಾರ್ಟರ್‌ ಫೈನಲ್‌ ಹಂತವನ್ನು ದಾಟಿಲ್ಲ. ಬಹುತೇಕ ಸಂದರ್ಭದಲ್ಲಿ ಬಲಿಷ್ಠ ಕೊರಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿವೆ. ಆದರೆ, ಈ ಬಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕೊರಿಯಾ ಎದುರಾಗುವುದನ್ನು ತಪ್ಪಿಸಿಕೊಂಡಿದೆ. ಪುರುಷರ ತಂಡ ಫೈನಲ್‌ ಪ್ರವೇಶಿಸಿದರೆ ಅಲ್ಲಿ ಕೊರಿಯಾ ಎದುರಾಗುವ ಸಾಧ್ಯತೆಯಿದೆ. ಮಹಿಳೆಯರಿಗೆ ಸೆಮಿಫೈನಲ್‌ನಲ್ಲಿ ಕೊರಿಯಾ ಮುಖಾಮುಖಿಯಾಗಬಹುದು.

ಫ್ರಾನ್ಸ್ ಮತ್ತು ನೆದರ್ಲೆಂಡ್ಸ್‌ ನಡುವಿನ ವಿಜೇತರನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಎದುರಿಸಲಿದೆ. ಅರ್ಹತಾ ಸುತ್ತಿನಲ್ಲಿ ಆತಿಥೇಯ ಫ್ರಾನ್ಸ್‌ ಐದನೇ ಸ್ಥಾನ ‍‍ಪಡೆದಿದ್ದು, ಮುಂದಿನ ಸುತ್ತಿನಲ್ಲಿ ಭಾರತಕ್ಕೆ ಎದುರಾಳಿಯಾಗುವ ಸಾಧ್ಯತೆ ಹೆಚ್ಚು.

ಭಾರತ ತಂಡದ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅರ್ಹತಾ ಸುತ್ತಿನಲ್ಲಿ 666 ಪಾಯಿಂಟ್‌ಗಳೊಡನೆ 11ನೇ ಸ್ಥಾನ ಪಡೆದಿದ್ದ ಅಂಕಿತಾ ಮೇಲೆ ನಿರೀಕ್ಷೆ ಹೆಚ್ಚಿದೆ. ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಪಿಕಾ ಹಿಂದಿನ ಸುತ್ತಿನಲ್ಲಿ (23ನೇ ಸ್ಥಾನ) ನಿರಾಸೆ ಮೂಡಿಸಿದ್ದು, ಮುಂದಿನ ಸುತ್ತಿನಲ್ಲಿ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಫ್ರಾನ್ಸ್‌ ತಂಡದಲ್ಲಿ ಲಿಸಾ ಬಾರ್ಬೆಲಿನ್, ಅಮೆಲಿ ಕಾರ್ಡೊ ಮತ್ತು ಕ್ಯಾರೊಲಿನ್ ಲೋಪೆಜ್ ಇದ್ದಾರೆ. 

2021ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಕಪ್‌ (ಹಂತ 3) ಟೂರ್ನಿಯಲ್ಲಿ ಚಿನ್ನವನ್ನು ಗೆಲ್ಲುವ ಹಾದಿಯಲ್ಲಿ ಭಾರತ ವನಿತೆಯರು ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿದ್ದರು. ಅಂದಿನ ತಂಡದಲ್ಲಿ ಅಂಕಿತಾ, ದೀಪಿಕಾ ಮತ್ತು ಕೋಮಲಿಕಾ ಬಾರಿ ಇದ್ದರು.

ಪುರುಷರ ಸ್ಪರ್ಧೆ ನಾಳೆ: ಪುರುಷರ ತಂಡದ ಪದಕ ಸುತ್ತಿನ ಸ್ಪರ್ಧೆ ಸೋಮವಾರ ನಡೆಯಲಿದೆ. ಧೀರಜ್‌, ತರುಣ್‌ದೀಪ್‌ ರಾಯ್‌ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ ತಂಡವೂ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ.

ಶಾಂಘೈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಕೊರಿಯಾ ತಂಡವನ್ನು ಸೋಲಿಸಿ ಐತಿಹಾಸಿಕ ಚಿನ್ನ ಗೆದ್ದ ಭಾರತದ ತರುಣರು ಮತ್ತೊಂದು ಸಾಧನೆಯ ಹೊಸ್ತಿಲಲ್ಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನ ಪಡೆದ ಟರ್ಕಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆಯಿದೆ. ಉಭಯ ತಂಡಗಳು ಇತ್ತೀಚಿನ ದಿನಗಳಲ್ಲಿ ಮುಖಾಮುಖಿಯಾಗಿಲ್ಲ.

ಧೀರಜ್‌ ಮತ್ತು ಅಂಕಿತಾ ಅವರನ್ನು ಒಳಗೊಂಡ ಮಿಶ್ರ ತಂಡವು ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದಿದ್ದು, ಮುಂದಿನ ಸುತ್ತಿನಲ್ಲಿ 12ನೇ ಶ್ರೇಯಾಂಕದ ಇಂಡೊನೇಷ್ಯಾ ತಂಡವನ್ನು ಎದುರಿಸಲಿದೆ. ಇಲ್ಲಿ ಮುನ್ನಡೆದರೆ ನಂತರದ ಸುತ್ತುಗಳಲ್ಲಿ ಕ್ರಮವಾಗಿ ಚೀನಾ ಮತ್ತು ಕೊರಿಯಾ ತಂಡಗಳ ಸವಾಲನ್ನು ಎದುರಿಸಬೇಕಿದೆ. ಈ ವಿಭಾಗದ ಪದಕ ಸುತ್ತಿನ ಸ್ಪರ್ಧೆ ಆ.2ರಂದು ನಡೆಯಲಿದೆ.  

ಭಾರತದ ಭಜನ್ ಕೌರ್

ಭಾರತದ ದೀಪಿಕಾ ಕುಮಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.