ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಕ್ರೀಡಾಗ್ರಾಮ ತಲುಪಿದ ಆರ್ಚರಿ, ರೋಯಿಂಗ್‌ ತಂಡ

ಪಿಟಿಐ
Published 20 ಜುಲೈ 2024, 12:43 IST
Last Updated 20 ಜುಲೈ 2024, 12:43 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಪ್ಯಾರಿಸ್‌: ಭಾರತದ ಆರ್ಚರಿ ಮತ್ತು ರೋಯಿಂಗ್ ತಂಡಗಳು ಇಲ್ಲಿನ ಒಲಿಂಪಿಕ್ಸ್‌ ಕ್ರೀಡಾ ಗ್ರಾಮಕ್ಕೆ ಶುಕ್ರವಾರ ಬಂದಿಳಿದಿವೆ. ಇವು ಕ್ರೀಡಾಗ್ರಾಮಕ್ಕೆ ಬಂದ ಭಾರತದ ಮೊದಲ ತಂಡಗಳು ಎನಿಸಿವೆ  ಎಂದು ತಂಡದ ಷೆಫ್‌–ಡಿ–ಮಿಷನ್ ಗಗನ್‌ ನಾರಂಗ್‌ ಶನಿವಾರ ಮಾಹಿತಿ ನೀಡಿದ್ದಾರೆ.

ಈ ಎರಡು ತಂಡಗಳ ಸ್ಪರ್ಧಿಗಳು ತಮ್ಮ ಅಭಿಯಾನ ಆರಂಭಿಸಲು ಕಾತರರಾಗಿದ್ದಾರೆ ಎಂದೂ ಹೇಳಿದ್ದಾರೆ. ಭಾರತ ಪುರುಷರ ಹಾಕಿ ತಂಡ, ನೆದರ್ಲೆಂಡ್ಸ್‌ನಿಂದ ಇಲ್ಲಿಗೆ ತಲುಪಬೇಕಾಗಿದೆ. ಜುಲೈ 26 ರಿಂದ ಆಗಸ್ಟ್‌ 11ರವರೆಗೆ ಪ್ಯಾರಿಸ್‌ ಕ್ರೀಡೆಗಳು ನಡೆಯಲಿವೆ.

ADVERTISEMENT

‘ನಾನು ಗುರುವಾರ ರಾತ್ರಿಯೇ ಪ್ಯಾರಿಸ್‌ಗೆ ಬಂದಿಳಿದಿದ್ದು, ಕ್ರೀಡಾ ಗ್ರಾಮದೊಳಗೆ ಮಾಡಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದ್ದೇನೆ. ಆರ್ಚರಿ ಮತ್ತು ರೋಯಿಂಗ್‌ ತಂಡಗಳು ಇಲ್ಲಿ ತಲುಪಿದ ಭಾರತದ ಮೊದಲ ತಂಡಗಳಾಗಿವೆ. ಅವರಿಗೆ ಚೆಕ್‌ ಇನ್‌ ಆಗಲು ಏನೂ ಸಮಸ್ಯೆಯಾಗಲಿಲ್ಲ. ಅವರು ಹೊಂದಿಕೊಳ್ಳುತ್ತಿದ್ದು, ಕ್ರೀಡಾ ಗ್ರಾಮದ ಪರಿಚಯ ಮಾಡಿಕೊಳ್ಳುತ್ತಿದ್ದಾರೆ’ ಎಂದು 2012ರ ಲಂಡನ್‌ ಒಲಿಂಪಿಕ್ಸ್‌ನ ಶೂಟಿಂಗ್‌ ಕಂಚಿನ ಪದಕ ವಿಜೇತ ನಾರಂಗ್ ವಿವರಿಸಿದರು.

‘ಅವರು ಖುಷಿಯಾಗಿದ್ದಾರೆ. ಭಾರತ ಹಾಕಿ ತಂಡ ಕೂಡ ಶನಿವಾರವೇ ತಲುಪಬೇಕಾಗಿದೆ.  ಕ್ರೀಡಾಪಟುವಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ದಿನಗಳು ನೆನಪಿಗೆ ಬಂದವು’ ಎಂದರು.

‘ತಮ್ಮ ತಮ್ಮ ಸ್ಪರ್ಧೆಗಳಿಗೆ ಮೊದಲು ಅಥ್ಲೀಟುಗಳಿಗೆ ಎಲ್ಲವೂ ಲಭ್ಯವಾಗುವಂತೆ ಖಾತರಿಪಡಿಸಿಕೊಳ್ಳುವುದನ್ನು ನಾವು ಬಯಸಿದ್ದೇವೆ’ ಎಂದರು. ನಾರಂಗ್ ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಮ್ಮನ್ನು ಭಾರತ ಒಲಿಂಪಿಕ್ಸ್‌ ತಂಡದ ಷೆಫ್‌ ಡಿ ಮಿಷನ್ ಆಗಿ ನೇಮಕ ಮಾಡಿದ ಭಾರತ ಒಲಿಂಪಿಕ್‌ ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 20 ವಿವಿಧ ಕ್ರೀಡೆಗಳಲ್ಲಿ 117 ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.