ನವದೆಹಲಿ: ಭಾರತದ ವೃತ್ತಿಪರ ಬಾಕ್ಸರ್ ಮನ್‌ದೀಪ್ ಜಂಗ್ರಾ ಅವರು ಕೇಮನ್ ಐಲ್ಯಾಂಡ್‌ನಲ್ಲಿ ಸೋಮವಾರ ನಡೆದ ಸೆಣಸಾಟದಲ್ಲಿ ಬ್ರಿಟನ್‌ನ ಕಾನರ್ ಮೆಕಿಂಟೋಷ್ ಅವರನ್ನು ಸೋಲಿಸಿ ಡಬ್ಲ್ಯುಬಿಸಿ ವಿಶ್ವ ಬಾಕ್ಸಿಂಗ್ ಫೆಡರೇಷನ್‌ನ ಸೂಪರ್ ಫೆದರ್‌ವೇಟ್ ಚಾಂಪಿಯನ್ ಪಟ್ಟಕ್ಕೇರಿದರು.
31 ವರ್ಷ ವಯಸ್ಸಿನ ಮನ್‌ದೀಪ್ ಅವರು ಒಲಿಂಪಿಕ್ಸ್ ಮಾಜಿ ಬೆಳ್ಳಿ ಪದಕ ವಿಜೇತ ರಾಯ್ ಜೋನ್ಸ್ ಜೂನಿಯರ್ ಅವರಿಂದ ತರಬೇತಿ ಪಡೆಯುತ್ತಿದ್ದು, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಒಮ್ಮೆ ಮಾತ್ರ ಸೋಲನುಭವಿಸಿದ್ದಾರೆ. ಮೆಕಿಂಟೋಷ್ ವಿರುದ್ಧ ಸೆಣಸಾಟದ ಬಹುತೇಕ ಸುತ್ತುಗಳಲ್ಲಿ ಅವರು ಮೇಲುಗೈ ಸಾಧಿಸಿದರು.
ಮನ್‌ದೀಪ್ ನಡೆಸಿದ ಪ್ರಹಾರಗಳ ವೇಗಕ್ಕೆ ಹೊಂದಿಕೊಳ್ಳಲು ಬ್ರಿಟನ್‌ನ ಬಾಕ್ಸರ್ ಪರದಾಡಿದರು. ಚೇತರಿಸಿ ಮರುಹೋರಾಟ ನೀಡುವ ಅವರ ಯತ್ನ ಯಶಸ್ವಿಯಾಗಲಿಲ್ಲ.
‘ಇದು ನನ್ನ ಬದುಕಿನ ಅತಿ ದೊಡ್ಡ ಗೆಲುವು. ನನ್ನ ಪ್ರಾಯೋಜಕರು, ಕೋಚ್ ರಾಯ್ ಜೋನ್ಸ್, ಸಹಾಯಕ ಕೋಚ್‌ಗಳಿಗೆ ಧನ್ಯವಾದ ಅರ್ಪಿಸುವೆ’ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ಸಾಧನೆಗಾಗಿ ನಾನು ವರ್ಷಗಳ ಕಾಲ ಕಠಿಣ ಶ್ರಮ ಹಾಕಿದ್ದೆ. ದೇಶಕ್ಕೆ ಹೆಮ್ಮೆ ಮೂಡಿಸುವಲ್ಲಿ ಸಫಲನಾಗಿದ್ದಕ್ಕೆ ಸಂತಸವಿದೆ’ ಎಂದು ಹರಿಯಾಣದ ಬಾಕ್ಸರ್ ತಿಳಿಸಿದ್ದಾರೆ. 2021ರಲ್ಲಿ ವೃತ್ತಿಪರರಾದ ಅವರು, ತಮ್ಮ ಈ ಸಾಧನೆಯು ಭಾರತದ ಇನ್ನಷ್ಟು ಬಾಕ್ಸರ್‌ಗಳಿಗೆ ವೃತ್ತಿಪರರಾಗಲು ಪ್ರೇರಣೆಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ನಮ್ಮ ದೇಶದ ಬಾಕ್ಸರ್‌ಗಳು ಉತ್ತಮವಾಗಿದ್ದಾರೆ. ಅವರಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಅವರಿಗೆ ಉತ್ತಮ ಪ್ರಮೋಟರ್‌ಗಳು ಮತ್ತು ಮ್ಯಾನೇಜರ್‌ಗಳು ದೊರೆತರೆ ಅವರೂ ವಿಶ್ವ ಚಾಂಪಿಯನ್ನರಾಗಬಹುದು’ ಎಂದು ಜಂಗ್ರಾ ಹೇಳಿದರು.
ವೃತ್ತಿಪರರಾದ ಮೇಲೆ 12 ಸೆಣಸಾಟಗಳಲ್ಲಿ ಅವರು 11 ರಲ್ಲಿ ಗೆದ್ದಿದ್ದಾರೆ. ಏಳರಲ್ಲಿ ನಾಕೌಟ್ ಗೆಲುವು ಪಡೆದಿದ್ದಾರೆ. ಅಮೆಚೂರ್ ಆಗಿಯೂ ಅವರ ಸಾಧನೆ ಉತ್ತಮವಾಗಿದ್ದು 2014ರ ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.