ಟೋಕಿಯೊ: ಭಾರತದ ಭರವಸೆಯಾಗಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್, ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ.
ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ರ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ 2-3ರಿಂದ ಸೋಲು ಅನುಭವಿಸಿದರು.
ಬಹುತೇಕ ತಮ್ಮ ಕೊನೆಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 38 ವರ್ಷದ ಮೇರಿ ಕೋಮ್ ಅವರಿಗೆ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.
2021ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಮೊದಲ ರೌಂಡ್‌ನಲ್ಲಿ 1-4ರ ಹಿನ್ನಡೆ ಅನುಭವಿಸಿದರು. ಬಳಿಕ ದಿಟ್ಟ ಹೋರಾಟ ನೀಡಿದರೂ ಯಶಸ್ಸು ದಕ್ಕಲಿಲ್ಲ.
ಪಂದ್ಯ ಮುಗಿದ ಬಳಿಕ ಮೇರಿ ಕೋಮ್ ಅತ್ಯಂತ ಭಾವುಕರಾದರು.
ಅತ್ತ 32 ವರ್ಷದ ವಲೆನ್ಸಿಯಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಲ್ಲದೆ ಇದೇ ಮೊದಲ ಬಾರಿಗೆ ಮೇರಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.