ADVERTISEMENT

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ | ಪ್ರಣಯ್‌ಗೆ ಸೋಲು; ಭಾರತದ ಸವಾಲು ಅಂತ್ಯ

ಪಿಟಿಐ
Published 14 ಜೂನ್ 2024, 14:05 IST
Last Updated 14 ಜೂನ್ 2024, 14:05 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಸಿಡ್ನಿ: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಎಚ್‌.ಎಸ್‌.ಪ್ರಣಯ್ ಅವರು ‌ಕ್ವಾರ್ಟರ್‌ಫೈನಲ್‌ನಲ್ಲಿ ತಮಗಿಂತ ಉನ್ನತ ಕ್ರಮಾಂಕದ ಆಟಗಾರ ಕೊಡೈ ನರವೊಕಾ ಅವರಿಗೆ 19–21, 13–21ರಲ್ಲಿ ಮಣಿದರು. ಇದರೊಂದಿಗೆ ಆಸ್ಟ್ರೇಲಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಕಂಡಿತು.

ವಿಶ್ವದ 10ನೇ ಕ್ರಮಾಂಕದ ಆಟಗಾರ ಕೊನೆಯವರಾಗಿ ಭಾರತದ ಸವಾಲು ಉಳಿಸಿಕೊಂಡಿದ್ದರು. ಇದಕ್ಕೆ ಮೊದಲು ಸಮೀರ್‌ ವರ್ಮಾ ಪುರುಷರ ಸಿಂಗಲ್ಸ್‌ನಲ್ಲಿ, ಆಕರ್ಷಿ ಕಶ್ಯಪ್ ಮಹಿಳೆಯರ ಸಿಂಗಲ್ಸ್‌ನಲ್ಲಿ ನಿರ್ಗಮಿಸಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಬಿ.ಸುಮೀತ್ ರೆಡ್ಡಿ ದಂಪತಿ ಸೋಲನುಭವಿಸಿತ್ತು.

ಮೊದಲ ಗೇಮ್‌ನಲ್ಲಿ ಪ್ರಣವಯ್ 10–16 ಹಿನ್ನಡೆಯಿಂದ ಚೇತರಿಸಿ, ನಂತರ 18–18ರಲ್ಲಿ ಸಮ ಮಾಡಿಕೊಂಡು ಹೋರಾಟ ತೋರಿದ್ದರು. ಆದರೆ ನರವೊಕಾ ಒತ್ತಡ ಮೆಟ್ಟಿನಿಂತು ಪಂದ್ಯ ಗೆದ್ದರು. ಎರಡನೇ ಗೇಮ್‌ನಲ್ಲಿ ಜಪಾನ್‌ನ ಆಟಗಾರ ಪ್ರಾಬಲ್ಯ ಮೆರೆದರು.

ADVERTISEMENT

ಮಾಜಿ ಅಗ್ರಮಾನ್ಯ ಆಟಗಾರ ಲೊಹ್ ಕೀನ್ ಯಿವ್ ಅವರಿಗೆ ಆಘಾತ ನೀಡಿದ್ದ ವರ್ಮಾ ಎಂಟರ ಘಟ್ಟದಲ್ಲಿ ವಿಶ್ವದ 17ನೇ ಕ್ರಮಾಂಕದ ಆಟಗಾರ ಲಿನ್‌ ಚುನ್‌–ಯಿ (ಚೀನಾ ತೈಪಿ) ಅವರಿಗೆ ಸಾಟಿಯಾಗಲಿಲ್ಲ. ಲಿನ್‌ 38 ನಿಮಿಷಗಳಲ್ಲಿ 21–12, 21–13ರಲ್ಲಿ ಪಂದ್ಯ ಗೆದ್ದರು.

ಮಿಶ್ರ ಡಬಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಸುಮೀತ್‌– ಸಿಕ್ಕಿ ಅವರೂ ಹೆಚ್ಚು ಪೈಪೋಟಿ ನೀಡದೇ 12–21, 14–21ರಲ್ಲಿ ಅಗ್ರ ಶ್ರೇಯಾಂಕದ ಜಿಯಾನ್‌ ಝೆನ್ ಬಾಂಗ್– ವೀ ಯಾ ಷಿನ್ ಅವರಿಗೆ ಮಣಿದರು. ಪಂದ್ಯ ಸುಮಾರು ಅರ್ಧ ಗಂಟೆಯಲ್ಲಿ ಮುಗಿಯಿತು.

ಮಹಿಳಾ ಸಿಂಗಲ್ಸ್‌ನಲ್ಲಿ, ಎಂಟನೇ ಶ್ರೇಯಾಂಕದ ಆಕರ್ಷಿ 21–17, 21–12 ರಲ್ಲಿ ಚೀನಾ ತೈಪಿಯ ಯು ಪೊ ಪೈ ಅವರಿಗೆ 42 ನಿಮಿಷಗಳ ಪಂದ್ಯದಲ್ಲಿ ಶರಣಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.