ADVERTISEMENT

‘ಪ್ರೇಮನಗರಿ’ಯಲ್ಲಿ ಪ್ಯಾರಾ ಅಥ್ಲೀಟ್‌ಗಳ ಹಬ್ಬ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಭಾರತ ತಂಡವನ್ನು ಮುನ್ನಡೆಸಿದ ಸುಮಿತ್‌ ಅಂಟಿಲ್, ಭಾಗ್ಯಶ್ರೀ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 16:33 IST
Last Updated 29 ಆಗಸ್ಟ್ 2024, 16:33 IST
<div class="paragraphs"><p>ಪಾರಾಲಂಪಿಕ್ಸ್‌ ಲಾಂಛನ</p></div>

ಪಾರಾಲಂಪಿಕ್ಸ್‌ ಲಾಂಛನ

   

ಪ್ಯಾರಿಸ್‌: ಜಾವೆಲಿನ್ ಥ್ರೋ ತಾರೆ ಸುಮಿತ್ ಅಂಟಿಲ್ ಮತ್ತು ಶಾಟ್‌ಪಟ್‌ ಅಥ್ಲೀಟ್‌ ಭಾಗ್ಯಶ್ರೀ ಜಾಧವ್ ಅವರು ಬುಧವಾರ ರಾತ್ರಿ ನಡೆದ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಮೆರವಣಿಗೆಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು.

ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ಕೆಲವೇ ವಾರಗಳ ನಂತರ ‘ಪ್ರೇಮ ನಗರಿ’ ಪ್ಯಾರಿಸ್‌ನಲ್ಲಿ ಪ್ಯಾರಾ ಅಥ್ಲೀಟ್‌ಗಳ ಹಬ್ಬದ ಸಂಭ್ರಮ ಗರಿಗೆದರಿತು. ಚಾಂಪ್ಸ್ ಎಲಿಸ್‌ ಅವೆನ್ಯೂದಿಂದ ಪ್ರಾರಂಭಗೊಂಡ ಮೆರವಣಿಗೆಯು ನಾಲ್ಕು ಗಂಟೆ ಸಾಗಿ ಪ್ಲೇಸ್ ಡಿ ಲಾ ಕಾಂಕಾರ್ಡ್‌ನಲ್ಲಿ ಮುಕ್ತಾಯವಾಯಿತು.

ADVERTISEMENT

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ಗಣ್ಯರ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂಭ್ರಮದ ಕ್ಷಣಕ್ಕೆ 50 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.

ಕೂಟದಲ್ಲಿ ಭಾಗಿಯಾಗಿರುವ ನೂರಾರು ದೇಶಗಳ ಕ್ರೀಡಾಪಟುಗಳು ತಮ್ಮ ರಾಷ್ಟ್ರ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಬಾರಿ 250 ಕ್ರೀಡಾಪಟುಗಳನ್ನು ಒಳಗೊಂಡ ಬ್ರೆಜಿಲ್‌ ಅತಿದೊಡ್ಡ ತಂಡವಾದರೆ, ಮ್ಯಾನ್ಮಾರ್‌ (3 ಮಂದಿ) ಅತಿ ಚಿಕ್ಕ ತಂಡವಾಗಿದೆ. ಮೆರವಣಿಗೆ ವೇಳೆ ಉಕ್ರೇನ್‌ ತಂಡಕ್ಕೆ ಜನರ ಹರ್ಷೋದ್ಗಾರ ಸಿಕ್ಕಿತು. 

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌ ಅಂಟಿಲ್‌ ಮತ್ತು ಏಷ್ಯನ್ ಪ್ಯಾರಾ ಕ್ರೀಡಾಕೂಟದ ಎಫ್‌34 ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾಗ್ಯಶ್ರೀ ಅವರು ಭಾರತದ ಧ್ವಜಧಾರಿಯಾಗಿದ್ದರು.

ಭಾರತದ ಪ್ಯಾರಾಲಿಂಪಿಕ್ಸ್‌ ತಂಡದಲ್ಲಿ 84 ಕ್ರೀಡಾಪಟುಗಳಿದ್ದು, ಅವರು 12 ವಿವಿಧ ಕ್ರೀಡೆಗಳಲ್ಲಿ ಪದಕ ಬೇಟೆ ನಡೆಸುವರು.

‌ಟೋಕಿಯೊ ಕೂಟದಲ್ಲಿ ಭಾರತ ಐದು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಅದು ಈವರೆಗಿನ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಎರಡಂಕಿ ಸಂಖ್ಯೆಯ ಚಿನ್ನದ ಪದಕದೊಂದಿಗೆ ಕನಿಷ್ಠ 25 ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಈವರೆಗೆ ಕೇವಲ 31 ಪದಕಗಳನ್ನು ಗೆದ್ದಿದೆ. ಅದರಲ್ಲಿ 9 ಚಿನ್ನ, 12 ಬೆಳ್ಳಿ ಹಾಗೂ 10 ಕಂಚುಗಳು ಸೇರಿವೆ. 

ದೈಹಿಕ ನ್ಯೂನತೆ ಹೊಂದಿರುವ 4,000ಕ್ಕೂ ಹೆಚ್ಚು ಕ್ರೀಡಾಪಟುಗಳು 11 ದಿನ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್ ನಡೆದಿದ್ದ 35 ತಾಣಗಳಲ್ಲಿ 22ರಲ್ಲಿ ಸ್ಪರ್ಧೆಗಳು ಆಯೋಜನೆಗೊಂಡಿದೆ. ಸೆ.8ರಂದು ಕೂಟಕ್ಕೆ ತೆರೆ ಬೀಳಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.