ADVERTISEMENT

ಚೆಸ್‌ | ವಿಶ್ವ ಚಾಂಪಿಯನ್ ಕಾರ್ಲ್‌ಸನ್‌ಗೆ ಆಘಾತ ನೀಡಿದ ಭಾರತದ ಅರ್ಜುನ್

ಪಿಟಿಐ
Published 16 ಅಕ್ಟೋಬರ್ 2022, 13:57 IST
Last Updated 16 ಅಕ್ಟೋಬರ್ 2022, 13:57 IST
ಮ್ಯಾಗ್ನಸ್ ಕಾರ್ಲ್‌ಸನ್‌– ಎಎಫ್‌ಪಿ ಚಿತ್ರ
ಮ್ಯಾಗ್ನಸ್ ಕಾರ್ಲ್‌ಸನ್‌– ಎಎಫ್‌ಪಿ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ಸ್ ಅರ್ಜುನ್ ಎರಿಗೈಸಿ ಅವರು ಏಮ್‌ಚೆಸ್‌ ರ‍್ಯಾಪಿಡ್‌ ಆನ್‌ಲೈನ್ ಚೆಸ್ ಟೂರ್ನಿಯಲ್ಲಿ ಭಾನುವಾರ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದರು.

19 ವರ್ಷದ ಅರ್ಜುನ್, ಟೂರ್ನಿಯ ಪ್ರಿಲಿಮನರಿ ಹಂತದ ಏಳನೇ ಸುತ್ತಿನಲ್ಲಿ ನಾರ್ವೆ ಆಟಗಾರನಿಗೆ ಆಘಾತ ನೀಡಿದರು.

ಕಾರ್ಲ್‌ಸನ್ ಎದುರಿಗೆ ಅರ್ಜುನ್‌ ಅವರಿಗೆ ಇದು ಮೊದಲ ಜಯವಾಗಿದೆ. ಕಳೆದ ತಿಂಗಳು ನಡೆದ ಜೂಲಿಯಸ್‌ ಬಾರ್ ಜನರೇಷನ್ ಕಪ್ ಟೂರ್ನಿಯಲ್ಲಿ ಅವರು ಮ್ಯಾಗ್ನಸ್‌ಗೆ ಸೋತಿದ್ದರು.

ADVERTISEMENT

ಅರ್ಜುನ್ ಅವರು ಟೂರ್ನಿಯಲ್ಲಿ ಸೋಲಿನ ಆರಂಭ ಮಾಡಿದ್ದರು. ಮೊದಲ ಸುತ್ತಿನಲ್ಲಿಭಾರತದವರೇ ಆದ ವಿದಿತ್ ಸಂತೋಷ್ ಗುಜರಾತಿ ಎದುರು ಮಣಿದಿದ್ದರು.

ಎಂಟು ಸುತ್ತುಗಳ ಬಳಿಕ ಅರ್ಜುನ್ (15 ಪಾಯಿಂಟ್ಸ್) ಐದನೇ ಸ್ಥಾನದಲ್ಲಿದ್ದಾರೆ. ಉಜ್ಬೆಕಿಸ್ತಾನದ ನಾದಿರ್ಬೆಕ್‌ ಅಬ್ದುಸತ್ತಾರೊವ್‌ (17), ಶಕರಿಯಾಯರ್‌ ಮಮೆದ್ಯರೊವ್‌ ಮತ್ತು ಕಾರ್ಲ್‌ಸನ್‌ (ಇಬ್ಬರೂ 16 ಪಾಯಿಂಟ್ಸ್) ಮತ್ತು ಪೋಲೆಂಡ್‌ನ ಜಾನ್‌ ಕ್ರಿಸ್ಟಾಫ್‌ ದುಡಾ (15) ಅವರು ಅರ್ಜುನ್‌ ಅವರಿಗಿಂತ ಮುಂದಿರುವ ಆಟಗಾರರು.

ಭಾರತದ ಡಿ. ಗುಕೇಶ್ 12 ಪಾಯಿಂಟ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರು. ವಿದಿತ್‌, ಆದಿತ್ಯ ಮಿತ್ತಲ್, ಪಿ. ಹರಿಕೃಷ್ಣ ಕ್ರಮವಾಗಿ 10, 11 ಮತ್ತು 15ನೇ ಸ್ಥಾನಗಳಲ್ಲಿದ್ದರು.

ಗುಕೇಶ್ ಒಂಬತ್ತನೇ ಸುತ್ತಿನಲ್ಲಿ ಕಾರ್ಲ್‌ಸನ್ ಅವರಿಗೆ ಮುಖಾಮುಖಿಯಾಗುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.