ನವದೆಹಲಿ: ಆರಂಭದಿಂದಲೂ ಶರವೇಗದಲ್ಲಿ ಓಡಿದ ದ್ಯುತಿ ಚಾಂದ್ ಮತ್ತು ಧರುಣ್ ಅಯ್ಯಸಾಮಿ ಅವರು ಇಂಡಿಯನ್ ಗ್ರ್ಯಾನ್ ಪ್ರಿ–2 ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಮಹಿಳೆಯರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ದ್ಯುತಿ 23.30 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಸಂಭ್ರಮಿಸಿದರು. ಇಂಡಿಯನ್ ಗ್ರ್ಯಾನ್ ಪ್ರಿ ಸೀರಿಸ್‌ನಲ್ಲಿ ದ್ಯುತಿ ಜಯಿಸಿದ ಎರಡನೇ ಚಿನ್ನದ ಪದಕ ಇದಾಗಿದೆ.
ದ್ಯುತಿ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದ್ದರು.
ಹರಿಯಾಣದ ಅಂಜಲಿ ದೇವಿ ಬೆಳ್ಳಿಯ ಪದಕ ಪಡೆದರು. ಅವರು 24.15 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಈ ವಿಭಾಗದ ಕಂಚಿನ ಪದಕ ಆಂಧ್ರಪ್ರದೇಶದ ಸುಪ್ರಿಯಾ ಮದ್ದಲ್ (24.48ಸೆ.) ಅವರ ಪಾಲಾಯಿತು.
ಪುರುಷರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಧರುಣ್ 49.94 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಧರುಣ್, ಗ್ರ್ಯಾನ್ ಪ್ರಿ ಸೀರಿಸ್‌ನಲ್ಲಿ ಈ ವರ್ಷ ಜಯಿಸಿದ ಸತತ ಎರಡನೇ ಚಿನ್ನ ಇದಾಗಿದೆ.
ಸಂತೋಷ್ ಕುಮಾರ್ (50.77ಸೆ.) ಮತ್ತು ರಾಮಚಂದ್ರನ್ (50.83ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
ಪುರುಷರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ತಮಿಳುನಾಡಿನ ಅರೋಕಿಯಾ ರಾಜೀವ್ ಚಿನ್ನ ಜಯಿಸಿದರು. ಅವರು 46.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
ಕರ್ನಾಟಕದ ಕೆ.ಎಸ್.ಜೀವನ್ (47.02ಸೆ.) ಬೆಳ್ಳಿಯ ಪದಕ ಗೆದ್ದರು. ಕೇರಳದ ಕುಞು ಮೊಹಮ್ಮದ್ (47.19ಸೆ.) ಕಂಚಿನ ಪದಕ ಪಡೆದರು.
1500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಅಜಯ್ ಕುಮಾರ್ ಸರೋಜ್ ಚಿನ್ನ ಗೆದ್ದರು. ಅವರು 3 ನಿಮಿಷ 46.10 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.
ಮಹಿಳೆಯರ 1500 ಮೀಟರ್ಸ್ ಓಟದ ಸ್ಪರ್ಧೆಯ ಚಿನ್ನ ಪಿ.ಯು.ಚಿತ್ರಾ ಅವರ ಪಾಲಾಯಿತು. ಅವರು 4 ನಿಮಿಷ 20.76 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.