ADVERTISEMENT

ಹಾಕಿ ಟೆಸ್ಟ್‌: ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:43 IST
Last Updated 24 ಅಕ್ಟೋಬರ್ 2024, 14:43 IST
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರು –ಪಿಟಿಐ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರು –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಸುಖ್‌ಜೀತ್‌ ಸಿಂಗ್‌ ಅವರ ಅಮೋಘ ಆಟದ ಬಲದಿಂದ ಭಾರತ ತಂಡವು ಎರಡು ಟೆಸ್ಟ್‌ಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಜರ್ಮನಿ ತಂಡವನ್ನು 5–3 ಗೋಲುಗಳಿಂದ ಗುರುವಾರ ಸೋಲಿಸಿತು. ಆದರೆ, ಸರಣಿ ಪ್ರವಾಸಿ ತಂಡದ ಪಾಲಾಯಿತು.

ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ಸರಣಿಯ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಆತಿಥೇಯ ತಂಡವು 1–3ರಿಂದ ನಿರಾಸೆ ಅನುಭವಿಸಿತು.

ಮೊದಲ ಪಂದ್ಯದಲ್ಲಿ 0–2 ಗೋಲುಗಳಿಂದ ಪರಾಭವಗೊಂಡಿದ್ದ ಭಾರತ ತಂಡವು ಇಲ್ಲಿನ ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸಾಂಘಿಕ ಆಟ ಪ್ರದರ್ಶಿಸಿತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚುರುಕಿನ ಆಟ ಪ್ರದರ್ಶಿಸಿತು.

ADVERTISEMENT

ಭಾರತದ ಪರ ಸುಖಜೀತ್ (34ನೇ, 48ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (42ನೇ, 43ನೇ), ಅಭಿಷೇಕ್ (45ನೇ ನಿಮಿಷ) ಗೋಲು ಗಳಿಸಿದರು. ಜರ್ಮನಿ ಪರ ಎಲಿಯನ್ ಮಜ್ಕೂರ್ (7ನೇ, 57ನೇ), ಹೆನ್ರಿಕ್ ಮೆರ್ಟ್‌ಜೆನ್ಸ್‌ (60ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಪರ ಆದಿತ್ಯ ಏಕೈಕ ಸ್ಕೋರರ್‌ ಎನಿಸಿಕೊಂಡರೆ, ಹರ್ಮನ್‌ಪ್ರೀತ್, ಅಭಿಷೇಕ್ ಮತ್ತು ಮೊಹಮ್ಮದ್ ರಹೀಲ್ ವಿಫಲರಾದರು. ಗೋಲ್‌ಕೀಪರ್‌ ಕ್ರಿಶನ್ ಬಹದ್ದೂರ್ ಪಾಠಕ್ ಎದುರಾಳಿ ತಂಡದ ಎರಡು ಸ್ಕೋರ್‌ ತಡೆದರೂ ಸರಣಿ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 

ಹಾಕಿ ಟೆಸ್ಟ್‌ ಸರಣಿ ಗೆದ್ದ ಜರ್ಮನಿ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.