ಎಂದಿನಂತೆ ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಭಾರತಕ್ಕೆ ಪದಕದ ನಿರೀಕ್ಷೆ ಹುಟ್ಟಿಸಿರುವ ಏಕೈಕ ಗುಂಪು ಕ್ರೀಡೆ– ಪುರುಷರ ವಿಭಾಗದ ಹಾಕಿ. ಪದಕರಹಿತ 41 ವರ್ಷಗಳ ದೀರ್ಘ ವಿರಾಮದ ನಂತರ 2021ರ ಟೋಕಿಯೊ ಕ್ರೀಡೆಗಳಲ್ಲಿ ಭಾರತ ಕಂಚಿನ ಪದಕ ಪಡೆದಿದ್ದು, ರೋಮಾಂಚನ ಮೂಡಿಸಿತ್ತು. ಹೀಗಾಗಿಯೇ ಅಭಿಮಾನಿಗಳಲ್ಲಿ ಆಸೆ ಮೊಳಕೆಯೊಡೆದಿದೆ.
ಒಲಿಂಪಿಕ್ಸ್‌ನಲ್ಲಿ 12 ತಂಡಗಳು ಕಣದಲ್ಲಿದ್ದು, ಎರಡು ಗುಂಪುಗಳಲ್ಲಿ ಆರು ತಂಡಗಳನ್ನು ವಿಭಜಿಸಲಾಗಿದೆ. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಭಾರತ ತಂಡ ಪ್ರಬಲ ‘ಬಿ’ ಗುಂಪಿನಲ್ಲಿದೆ. ಹೋದ ವರ್ಷ ಚೀನಾದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ನೇರವಾಗಿ ಒಲಿಂಪಿಕ್ಸ್‌ಗೆ ಟಿಕೆಟ್ ಸಂಪಾದಿಸಿತ್ತು.
ಗುಂಪು ಹಂತದಲ್ಲೇ ಸವಾಲು:
ಭಾರತ ತಂಡಕ್ಕೆ ಗುಂಪು ಹಂತದಲ್ಲೇ ಪ್ರಬಲ ಸವಾಲು ಇದೆ. ‘ಬಿ’ ಗುಂಪಿನಲ್ಲಿರುವ ಭಾರತ ತಂಡಕ್ಕೆ, ಮೇಲಿನ ಕ್ರಮಾಂಕದಲ್ಲಿರುವ ಬೆಲ್ಜಿಯಂ (3ನೇ ಕ್ರಮಾಂಕ), ಆಸ್ಟ್ರೇಲಿಯಾ (4ನೇ ಕ್ರಮಾಂಕ) ಮತ್ತು ಅರ್ಜೆಂಟೀನಾ (6ನೇ ಕ್ರಮಾಂಕ) ತಂಡಗಳಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಂತೂ ಇದೆ. ಬೆಲ್ಜಿಯಂ 2020ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿತ್ತು. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳು ಭಾರತಕ್ಕಿಂತ ಕಡಿಮೆ ರ್‍ಯಾಂಕಿಂಗ್ ಹೊಂದಿವೆ.
‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ಆತಿಥೇಯ ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಭಾರತದ ಮೊದಲ ಗುರಿ ಗುಂಪಿನಲ್ಲಿ ಮೊದಲ ನಾಲ್ಕರಲ್ಲಿ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ತಲುಪುವುದು. ನಂತರ ಪ್ರತಿ ಪಂದ್ಯ ಗುರುತರ.
ಆದರೆ ಒಲಿಂಪಿಕ್ಸ್ ವರ್ಷದಲ್ಲಿ ಭಾರತ ತಂಡದ ಪ್ರದರ್ಶನ ಗಮನಾರ್ಹ ಮಟ್ಟದಲ್ಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಏಪ್ರಿಲ್‌ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0–5 ನಿರಾಶೆ ಅನುಭವಿಸಿತು. ಮೇ 22 ರಿಂದ ಜೂನ್ 12ರವರೆಗಿನ ಅವಧಿಯಲ್ಲಿ ನಡೆದ ಪ್ರೊ ಲೀಗ್‌ನ ಆ್ಯಂಟ್‌ವರ್ಪ್ ಮತ್ತು ಲಂಡನ್ ಲೆಗ್‌ನ ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಿತು. ವಿಶ್ವ ರ‍್ಯಾಂಕಿಂಗ್‌ನಲ್ಲೂ ಕುಸಿತ ಕಂಡು ಏಳನೇ ಸ್ಥಾನಕ್ಕೆ ಸರಿಯಬೇಕಾಗಿಯಿತು.
ಅನುಭವಿಗಳ ತಂಡ:
ಆದರೆ ತಂಡ ಸಾಕಷ್ಟು ಅನುಭವಿಗಳಿಂದ ಕೂಡಿದ್ದು, ತಿಂಗಳ ಕಾಲ ಶಿಬಿರದ ನಂತರ ಆತ್ಮವಿಶ್ವಾಸದಿಂದ ಇದೆ. ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ಮಾಜಿ ನಾಯಕ ಮನ್‌ಪ್ರೀತ್ ಅವರಿಬ್ಬರಿಗೆ ಇದು ನಾಲ್ಕನೇ ಒಲಿಂಪಿಕ್ಸ್. ಹರ್ಮನ್‌ಪ್ರೀತ್ ಅವರಿಗೆ ಮೂರನೇಯದ್ದು. ಲಲಿತ್ ಉಪಾಧ್ಯಾಯ ಸೇರಿದಂತೆ ಮೂವರಿಗೆ ಎರಡನೇ ಒಲಿಂಪಿಕ್ಸ್. ದಿಲೀಪ್ ಟಿರ್ಕೆಪ್ರಕಾರ ಡ್ರ್ಯಾಗ್ ಫ್ಲಿಕರ್, ನಾಯಕ ಹರ್ಮನ್‌ಪ್ರೀತ್ ಅವರ ಫಾರ್ಮ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ತಂಡದ ಐವರಿಗೆ (ಜರ್ಮನ್‌ಪ್ರೀತ್, ಸಂಜಯ್, ರಾಜಕುಮಾರ್ ಪಾಲ್, ಅಭಿಷೇಕ್ ಪಾಲ್ ಮತ್ತು ಸುಖಜೀತ್ ಸಿಂಗ್) ಇದು ಮೊದಲ ಒಲಿಂಪಿಕ್ಸ್.
ಹಲವು ವರ್ಷ ಭಾರತ ತಂಡದಲ್ಲಿ ಆಡಿರುವ ಪರಾಟ್ಟು ರವೀಂದ್ರನ್ ಶ್ರೀಜೇಶ್ ಅವರಿಗೆ ಪದಕ ಗೆಲ್ಲಿಸುವ ಮೂಲಕ ವಿದಾಯದ ಉಡುಗೋರೆ ನೀಡಲು ಆಟಗಾರರು ಉತ್ಸುಕರಾಗಿದ್ದಾರೆ.
ಈವ್ಸ್ ಡ್ಯು ಮ್ಯಾನುವಾ ಕ್ರೀಡಾಂಗಣದಲ್ಲಿ ಭಾರತ ಜುಲೈ 27ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಧ್ಯಾನ್‌ಚಂದ್
ಹಾಕಿ ಮಾಂತ್ರಿಕ ಎಂದೇ ಹೆಸರಾದ ಧ್ಯಾನ್‌ಚಂದ್ ಅವರು ಭಾರತ ಹಾಕಿ ತಂಡ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದಾಗ (1928, ಆಮ್‌ಸ್ಟರ್ಡಾಮ್) ಮತ್ತು ನಂತರದ ಎರಡು ಒಲಿಂಪಿಕ್ಸ್‌ಗಳಲ್ಲಿ (1932, 1936) ಆಡಿದ್ದರು. ಸೆಂಟರ್‌ಫಾರ್ವರ್ಡ್ ಸ್ಥಾನದಲ್ಲಿ ಆಡುತ್ತಿದ್ದ ಧ್ಯಾನ್‌ಚಂದ್ ಅವರು ಒಲಿಂಪಿಕ್ಸ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ 37 ಗೋಲು ಗಳಿಸಿದ್ದರು.
ಬಲ್ಬೀರ್ ಸಿಂಗ್ ಸೀನಿಯರ್
ಭಾರತ ಹಾಕಿಯ ಸುವರ್ಣಯುಗದ ಆಟಗಾರ, ನಾಯಕ, ಕೋಚ್ ಆಗಿ ಯಶಸ್ಸು ಕಂಡ ದಿಗ್ಗಜ ಬಲ್ಬೀರ್ ಸಿಂಗ್ ಸೀನಿಯರ್ ಶ್ರೇಷ್ಠ ಸೆಂಟರ್‌ಫಾರ್ವರ್ಡ್‌ಗಳಲ್ಲಿ ಒಬ್ಬರು. ಆಡಿದ ಮೂರು ಒಲಿಂಪಿಕ್ಸ್‌ಗಳಲ್ಲಿ (1948, 1952, 1956) ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊನೆಯ ಬಾರಿ (ಮೆಲ್ಬರ್ನ್) ಒಲಿಂಪಿಕ್ಸ್‌ನಲ್ಲಿ ಆಡಿದಾಗ ತಂಡದ ನಾಯಕರಾಗಿದ್ದರು. 61 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 246 ಗೋಲುಗಳನ್ನು ಗಳಿಸಿದ ಹಿರಿಮೆ ಅವರದು. 1975ರಲ್ಲಿ ಭಾರತ ಇದುವರೆಗಿನ ಏಕೈಕ ಚಿನ್ನ ಗೆದ್ದ ಸಂದರ್ಭದಲ್ಲಿ ಅವರು ತಂಡದ ಮ್ಯಾನೇಜರ್– ಚೀಫ್ ಕೋಚ್ ಆಗಿದ್ದರು.
ಎಂ.ಪಿ.ಗಣೇಶ್
ಕನ್ನಡಿಗ, ಕೊಡಗಿನ ಎಂ.ಪಿ.ಗಣೇಶ್ 1960 ಮತ್ತು 70ರ ದಶಕದ ಆರಂಭದಲ್ಲಿ ಭಾರತ ಹಾಕಿ ತಂಡದಲ್ಲಿ ಆಡಿದವರು. 1970ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ಹಾಕಿ ತಂಡದಲ್ಲಿ ಆಡಿದ್ದರು. 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿದ್ದರು. ಅವರ ನೇತೃತ್ವದ ತಂಡ 1973ರಲ್ಲಿ ನೆದರ್ಲೆಂಡ್ಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು.
ಅಶೋಕ್ ಕುಮಾರ್ ಧ್ಯಾನಚಂದ್
ಧ್ಯಾನ್‌ಚಂದ್ ಅವರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿ ಆಟದಲ್ಲಿ ದೊಡ್ಡ ಹೆಸರು. 1975ರಲ್ಲಿ ಭಾರತ ಏಕೈಕ ಬಾರಿ ಹಾಕಿ ವಿಶ್ವಕಪ್ ಗೆದ್ದಾಗ ಪಾಕ್ ವಿರುದ್ಧ ನಿರ್ಣಾಯಕ ಗೋಲು ಗಳಿಸಿದ್ದರು. ಎರಡು ಒಲಿಂಪಿಕ್ಸ್‌ಗಳಲ್ಲಿ (1972 ಮತ್ತು 1976) ದೇಶವನ್ನು ಪ್ರತಿನಿಧಿಸಿದ್ದರು. ಮ್ಯೂನಿಕ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. 1979ರಲ್ಲಿ ಅವರು ತಂಡದ ನಾಯಕರೂ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.