ಬ್ಯಾರನೊವಿಚಿ, ಬೆಲಾರಸ್: ಕಳಪೆ ಪ್ರದರ್ಶನ ತೋರಿದ ಭಾರತ ಮಹಿಳಾ ಕಿರಿಯರ ಹಾಕಿ ತಂಡವು ಬೆಲಾರಸ್‌ನ ಹಿರಿಯ ಮಹಿಳಾ ತಂಡದ ವಿರುದ್ಧ ಸೋಮವಾರ 1–4 ಗೋಲುಗಳಿಂದ ಮಣಿಯಿತು.
ಪಂದ್ಯದ ಆರಂಭಿಕ ನಿಮಿಷಗಳಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತು. ಈ ವೇಳೆ ಭಾರತದ ಗಗನದೀಪ್ ಕೌರ್ ತಪ್ಪು ಮಾಡಲಿಲ್ಲ. ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಆ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಬೆಲಾರಸ್ ಪರ ಸ್ವಿಯಾಟ್ಲಾನಾ ಬಾಹುಶೆವಿಚ್ ಮೊದಲ ಗೋಲು ಬಾರಿಸಿ ಸ್ಕೋರ್ ಸಮಬಲಗೊಳಿಸಿದರು.
ಮೊದಲ ಕ್ವಾರ್ಟರ್ ಬಳಿಕ ಆಟದ ವೇಗ ತಗ್ಗಿತು. ಆ ಬಳಿಕ ಆತಿಥೇಯ ತಂಡದ ಕ್ರೆಸ್ಟ್‌ಸಿನಾ ಪಾಪ್ಕೊವಾ ಮತ್ತೊಂದು ಗೋಲು ಗಳಿಸಿ 2–1 ಮುನ್ನಡೆ ತಂದುಕೊಟ್ಟರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಪಂದ್ಯದ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವ ವಿಶ್ವಾಸದೊಂದಿಗೆ ಆರಂಭಿಸಿತು. ಆದರೆ ಬೆಲಾರಸ್ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 3–1ರ ಮುನ್ನಡೆ ಪಡೆಯಿತು.
ಪ್ರವಾಸಿ ತಂಡದ ನಿರಂತರ ಪ್ರಯತ್ನವನ್ನು ವಿಫಲಗೊಳಿಸುತ್ತಲೇ ಮತ್ತೊಂದು ಗೋಲು ದಾಖಲಿಸಿದ ಬೆಲಾರಸ್ ಗೆಲುವಿನ ನಗೆ ಬೀರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.