ಜೊಹರ್ (ಮಲೇಷ್ಯಾ): ಭಾರತ ಜೂನಿಯರ್ ತಂಡ 12ನೇ ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ (21 ವರ್ಷದೊಳಗಿನವರ) ಶನಿವಾರ ಜಪಾನ್ ತಂಡದ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿ ನಿವೃತ್ತರಾದ ನಂತರ ಜೂನಿಯರ್ ತಂಡದ ತರಬೇತಿಯ ಹೊಣೆ ಹೊತ್ತಿರುವ ಪಿ.ಆರ್. ಶ್ರೀಜೇಶ್ ಅವರಿಗೆ ಇದು ಮೊದಲ ಸತ್ವಪರೀಕ್ಷೆಯಾಗಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಮುಗಿದ ತಕ್ಷಣ ಶ್ರೀಜೇಶ್ ಜೂನಿಯರ್ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್‌ನಲ್ಲಿ ಜಪಾನ್ ತಂಡ ಮುಖಾಮುಖಿ ಆಗಿದ್ದಾಗ ಭಾರತ 3–1 ರಿಂದ ಜಯಗಳಿಸಿತ್ತು. 2022ರ ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲೂ ಭಾರತ 5–1 ಗೋಲುಗಳಿಂದ ಜಯಗಳಿಸಿತ್ತು.
ಭಾರತ ತಂಡವು ಭಾನುವಾರ ಬ್ರಿಟನ್ ತಂಡವನ್ನು ಎದುರಿಸಲಿದೆ. 22ರಂದು ಆತಿಥೇಯ ಮಲೇಷ್ಯಾ ತಂಡವನ್ನು, 23ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಭಾರತ ಈ ಹಿಂದೆ 2013, 2014 ಮತ್ತು 2022 ರಲ್ಲಿ ಈ ಟೂರ್ನಿ ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.