ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳ ಪೈಕಿ ಒಬ್ಬರು, ದೀಪಕ್ ನಿವಾಸ್ ಹೂಡಾ. ‘ರನ್ನಿಂಗ್ ಹ್ಯಾಂಡ್ ಟಚ್’ ಮೂಲಕ ರೈಡಿಂಗ್‌ನಲ್ಲಿ ಎದುರಾಳಿಗಳನ್ನು ಕಂಗೆಡಿಸುವ ಅವರು ಸವಾಲಿನ ಸಂದರ್ಭದಲ್ಲಿ ತಂಡವನ್ನು ರಕ್ಷಿಸುವ ಆಪದ್ಬಾಂಧವ. ಕೊರೊನಾದಿಂದಾಗಿ ಉಂಟಾಗಿರುವ ವಿಷಮ ಸ್ಥಿತಿಯಲ್ಲಿ ಶರೀರಕ್ಕೆ ‘ಮೆರುಗು’ ತುಂಬುತ್ತಿರುವ ಅವರು ಕಸರತ್ತಿನ ಮೂಲಕ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ; ಜೀವನ ಪಾಠ ಹೇಳುವುದಕ್ಕೂ ನಿತ್ಯದ ಚಟುವಟಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಕಬಡ್ಡಿಗಾಗಿ ಮಾಡುತ್ತಿದ್ದ ವ್ಯಾಯಾಮದ ಜೊತೆಯಲ್ಲಿ ಮಾಂಸಖಂಡಗಳನ್ನು ಬೆಳೆಸುವ ಕಸರತ್ತುಗಳನ್ನೂ ಸೇರಿಸಿಕೊಂಡು ದೇಹಸಿರಿ ಹೆಚ್ಚಿಸುತ್ತಿರುವ ಹೂಡಾ ಅವರು ವ್ಯಾಯಾಮ ಮತ್ತು ಆರೋಗ್ಯದ ಬಗ್ಗೆ, ರೋಗನಿರೋಧಕ ಶಕ್ತಿ ವೃದ್ಧಿಸಲು ಸೇವಿಸುತ್ತಿರುವ ಔಷಧಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ಸಂದೇಶ ನೀಡುತ್ತಿದ್ದಾರೆ.
ಮಂದಿರಾ ಬೇಡಿಯವರ ‘ಹನಿ ಯೋಗ ಚಾಲೆಂಜ್’ನಲ್ಲಿ ಪಾಲ್ಗೊಂಡು ಬಿಸಿನೀರಿನಲ್ಲಿ ಜೇನುತುಪ್ಪ ಬೆರೆಸಿ ಸೇವಿಸುವ ಮತ್ತು ಸೂರ್ಯನಮಸ್ಕಾರ ಮಾಡುವ ವಿಡಿಯೊ ಪೋಸ್ಟ್ ಮಾಡಿದ್ದ ಹೂಡಾ ಈ ವಿಧಾನವು ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬ ಉಪಯುಕ್ತವಾಗಿದ್ದು ಇದನ್ನು ಅಭ್ಯಾಸ ಮಾಡುವಂತೆ ಅಭಿಮಾನಿಗಳಿಗೆ ಸಲಹೆ ನೀಡಿದ್ದರು.
ಪೆಡಲಿಂಗ್ ಮಾಡುವ ಚಿತ್ರವನ್ನು ಹಾಕಿ ‘ಸೈಕಲ್ ರೈಡ್ ಮಾಡುವುದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ. ಜೀವನವು ಸದಾ ಹರಿಯುವ ನೀರಾಗಿರಬೇಕು, ನಿಂತ ಕೊಚ್ಚೆಯಾಗಬಾರದು’ ಎಂದು ಹೇಳಿದ್ದಾರೆ. ಸೊಂಟಕ್ಕೆ ಬೆಲ್ಟ್ ಕಟ್ಟಿ ಓಡುವ ವಿಡಿಯೊ ಹಾಕಿ ‘ಚಲನಶೀಲವಾಗಿದ್ದರೆ ಮಾತ್ರ ಯಶಸ್ಸು ಸಾಧ್ಯ’ ಎಂದಿದ್ದಾರೆ. ಓಟಕ್ಕೆ ಸಜ್ಜಾಗಿರುವ ಚಿತ್ರದೊಂದಿಗೆ ಬರೆದಿರುವುದು ಹೀಗೆ ‘ವೇಗದ ಕುರಿತ ಚಿಂತೆ ಬದಿಗಿರಿಸಿ; ಮುನ್ನುಗ್ಗುವುದನ್ನು ಮಾತ್ರ ಮರೆಯದಿರಿ...’
ವಿಶಾಲ ಅಂಗಳದಲ್ಲಿ ನಿಂತ ಚಿತ್ರದ ಜೊತೆ ‘ಹೋರಾಟವನ್ನು ಅರ್ಧಕ್ಕೇ ನಿಲ್ಲಿಸಬೇಡಿ. ಈಗ ಸಾಕಷ್ಟು ಶ್ರಮ ಹಾಕಿ. ಜೀವನದ ಕೊನೆಯ ಅವಧಿಯಲ್ಲಿ ಖುಷಿಪಡಿ’ ಎಂಬ ಸಂದೇಶವಿದೆ. ಸ್ಯಾಂಡೊ ಬನಿಯನ್ ತೊಟ್ಟು ಫುಟ್‌ಪಾತ್‌ನಲ್ಲಿ ಎದೆಯುಬ್ಬಿಸಿ ಹೆಜ್ಜೆ ಹಾಕುವ ಚಿತ್ರದೊಂದಿಗೆ ‘ಗುರಿ ಇರಿಸಿ ಮುನ್ನುಗ್ಗಲು ಪ್ರತಿ ದಿನವೂ ಒಂದು ಅವಕಾಶ. ಅದನ್ನು ಸರಿಯಾಗಿ ಬಳಸಿಕೊಳ್ಳಿ’ ಎಂಬ ಸಂದೇಶ ಹಾಕಿದ್ದಾರೆ.
ಹರಿಯಾಣದ ಕೃಷಿಕರ ಕುಟುಂಬದಲ್ಲಿ ಜನಿಸಿದ ದೀಪಕ್ ಹೂಡಾ ಭಾರತಕ್ಕಾಗಿ ವಿಶ್ವಕಪ್, ಏಷ್ಯನ್ ಗೇಮ್ಸ್ ಮತ್ತು ಏಷ್ಯಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಆರಂಭದಲ್ಲಿ ತೆಲುಗು ಟೈಟನ್ಸ್ ತಂಡದಲ್ಲಿದ್ದ ಅವರು ನಂತರ ಪುಣೇರಿ ಪಲ್ಟನ್‌ನಲ್ಲಿ ಇದ್ದರು. ಈಗ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಸದಸ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.