ಶಾ ಆಲಂ (ಮಲೇಷ್ಯಾ): ಭಾರತ ಪುರುಷರ ತಂಡ, ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚೀನಾ ತಂಡಕ್ಕೆ 2–3 ಅಂತರದಿಂದ ಸೋತಿತು. ಡಬಲ್ಸ್‌ನಲ್ಲಿ ಸ್ಟಾರ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಗ್ ಶೆಟ್ಟಿ ಅವರ ಗೈರು ತಂಡಕ್ಕೆ ಗಾಢವಾಗಿ ತಟ್ಟಿತು.
ಭಾರತದ ಅಗ್ರ ಆಟಗಾರರಾದ ಎಚ್.ಎಸ್.ಪ್ರಣಯ್ ಮತ್ತು ಲಕ್ಷ್ಯ ಸೇನ್ ಅವರು ತಮ್ಮ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಚೀನಾದ ಎದುರಾಳಿಗಳನ್ನು ಸೋಲಿಸಿದರು. ಆದರೆ ಡಬಲ್ಸ್‌ನಲ್ಲಿ ಚೀನಾದ ಆಟಗಾರರು ಮುಂದಿನ ಎರಡೂ ಪಂದ್ಯಗಳನ್ನು ಗೆದ್ದುಕೊಂಡ ಪರಿಣಾಮ ಸ್ಕೋರ್ 2–2 ರಲ್ಲಿ ಸಮನಾಯಿತು. ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ ಚೀನಾದ ವಾಂಗ್ ಝೆಂಜ್ ಷಿಂಗ್ 21–15, 21–16 ರಿಂದ ಭಾರತದ ಚಿರಾಗ್ ಸೇನ್ ಅವರನ್ನು ಮಣಿಸಿ 3–2 ರಿಂದ ಹಣಾಹಣಿ ಗೆದ್ದುಕೊಂಡಿತು.
ಚೀನಾ ಗುಂಪಿನಲ್ಲಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಗುಂಪಿನಲ್ಲಿ ಎರಡೇ ತಂಡಗಳಿದ್ದು, ಭಾರತ ಕೂಡ ಎಂಟರ ಘಟ್ಟಕ್ಕೆ ಪ್ರವೇಶಿಸುವುದು ಖಚಿತವಾಗಿದ್ದ ಕಾರಣ, ಸಾತ್ವಿಕ್–ಚಿರಾಗ್ ಅವರಿಗೆ ವಿಶ್ರಾಂತಿ ನಿಡಲು ತಂಡದ ಚಿಂತಕರ ಚಾವಡಿ ನಿರ್ಧರಿತು ಎನ್ನಲಾಗಿದೆ.
ಭಾರತದ ಮಹಿಳಾ ತಂಡ ಮಂಗಳವಾರ ನಡೆದ ಲೀಗ್ ಪಂದ್ಯದಲ್ಲಿ 3–2 ರಿಂದ ಬಲಿಷ್ಠ ಚೀನಾ ತಂಡವನ್ನು ಮಣಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.