ನವದೆಹಲಿ: ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಕಳಪೆ ಸಾಧನೆಯ ಬಳಿಕ ಮುಖ್ಯ ಕೋಚ್ ಗ್ರಹಾಂ ರೀಡ್ ಅವರು ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಕೊನೆಗೊಂಡ ಎಫ್‌ಐಎಚ್ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಒಂಬತ್ತನೇ ಸ್ಥಾನ ಗಳಿಸಿತ್ತು. ಜರ್ಮನಿ ತಂಡವು ಫೈನಲ್‌ನಲ್ಲಿ ಬೆಲ್ಜಿಯಂಗೆ ಸೋಲುಣಿಸಿ ಪ್ರಶಸ್ತಿ ಜಯಿಸಿತ್ತು.
2019ರ ಏಪ್ರಿಲ್‌ನಲ್ಲಿ ಕೋಚ್ ಆಗಿ ನೇಮಕವಾಗಿದ್ದ ರೀಡ್, ಭಾರತ ತಂಡವು 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಜಯಿಸಲು ಮಾರ್ಗದರ್ಶನ ಮಾಡಿದ್ದರು.
ಆಸ್ಟ್ರೇಲಿಯಾದ, 58 ವರ್ಷದ ರೀಡ್ ತಮ್ಮ ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಸಲ್ಲಿಸಿದ್ದಾರೆ.
‘ರಾಜೀನಾಮೆ ನೀಡಿ ಅಧಿಕಾರ ಹಸ್ತಾಂತರ ಮಾಡಲು ಇದು ಸಕಾಲ. ತಂಡ ಮತ್ತು ಹಾಕಿ ಇಂಡಿಯಾದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ಗೌರವದ ಸಂಗತಿ. ಈ ಮಹಾಪಯಣದ ಪ್ರತಿ ಕ್ಷಣವನ್ನು ಆಸ್ವಾದಿಸಿದ್ದೇನೆ. ತಂಡಕ್ಕೆ ಶುಭ ಹಾರೈಸುವೆ‘ ಎಂದು ರೀಡ್ ಹೇಳಿದ್ದಾರೆ.
ರೀಡ್ ಅವರ ಕೋಚಿಂಗ್ ಅವಧಿ 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಇತ್ತು.
ಟಿರ್ಕಿ ಮತ್ತು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಅವರು ತಂಡದ ಸಾಧನೆ ಮತ್ತು ಮುಂದಿನ ತಂತ್ರಗಳ ಕುರಿತು ಆಟಗಾರರು ಮತ್ತು ನೆರವು ಸಿಬ್ಬಂದಿಯೊಂದಿಗೆ ನಡೆಸಿದ ಚರ್ಚೆಯ ಬಳಿಕ ರೀಡ್ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ರೀಡ್ ಅಲ್ಲದೆ ತಂಡದ ಅನಾಲಿಟಿಕಲ್ ಕೋಚ್ ಗ್ರೆಗ್ ಕ್ಲಾರ್ಕ್ ಮತ್ತು ವೈಜ್ಞಾನಿಕ ಸಲಹೆಗಾರ ಮಿಚೆಲ್ ಡೇವಿಡ್ ಪೆಂಬರ್ಟನ್ ಕೂಡ ತಮ್ಮ ಹುದ್ದೆಗಳಿಂದ ಕೆಳಗಿಳಿದಿದ್ದು, ಎಲ್ಲರೂ ಒಂದು ತಿಂಗಳು ‘ನೋಟಿಸ್ ಪಿರಿಯಡ್‘ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಮೂವರ ರಾಜೀನಾಮೆಯನ್ನು ಟಿರ್ಕಿ ಅಂಗೀಕರಿಸಿದ್ದಾರೆ. ಎಲ್ಲರ ಸೇವೆಗೆ ದೇಶ ಕೃತಜ್ಞತೆ ಸಲ್ಲಿಸುತ್ತದೆ ಎಂದಿದ್ದಾರೆ.
ಯಶಸ್ಸಿನ ಪಯಣ: ರೇಡ್ ಅವಧಿಯಲ್ಲಿ ಭಾರತ ತಂಡವು, 41 ವರ್ಷಗಳ ಬಳಿಕ ಒಲಿಂಪಿಕ್‌ನಲ್ಲಿ ಪದಕ ಜಯಿಸಿತ್ತು. ಕಳೆದ ವರ್ಷ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2021–22ರ ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.