ADVERTISEMENT

ಟೇಬಲ್‌ ಟೆನಿಸ್‌: ಜರ್ಮನಿ ಆಟಗಾರರ ಜೊತೆ ಭಾರತದ ತರಬೇತಿ

ಪೋರ್ಚುಗಲ್‌ನಲ್ಲಿ ಒಲಿಂಪಿಕ್ಸ್‌ ಟಿ.ಟಿ ಅರ್ಹತಾ ಟೂರ್ನಿ

ಪಿಟಿಐ
Published 31 ಡಿಸೆಂಬರ್ 2019, 19:45 IST
Last Updated 31 ಡಿಸೆಂಬರ್ 2019, 19:45 IST

ಚೆನ್ನೈ: ಒಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ ಟೀಮ್‌ ಅರ್ಹತಾ ಟೂರ್ನಿಗೆ ಸಿದ್ಧತೆ ನಡೆಸಲು ಭಾರತದ ಆಟಗಾರರು, ಜರ್ಮನಿಯ ಆಟಗಾರರೊಡನೆ ತರಬೇತಿ ಪಡೆಯಲಿದ್ದಾರೆ. ಜನವರಿ 22ರಿಂದ ಪೋರ್ಚುಗಲ್‌ನ ಗೊಂಡೊಮರ್‌ನಲ್ಲಿ ಅರ್ಹತಾ ಟೂರ್ನಿ ನಡೆಯಲಿದೆ.

ಜಿ.ಸತ್ಯನ್‌ (ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನ), ಶರತ್‌ ಕಮಲ್‌ (34) ಅವರು ತಂಡವಾಗಿ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿದ್ದಾರೆ.

ಭಾರತ ಪ್ರಸ್ತುತ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದರೂ, ಭಾರತ ಈ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಬಲ್ಲದು.

ADVERTISEMENT

‘ನಾವು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿದ್ದೇವೆ. ಕ್ರೊವೇಷಿಯಾ, ಹಾಂಗ್‌ಕಾಂಗ್‌ನಂಥ ಕಠಿಣ ಸವಾಲೊಡ್ಡಬಲ್ಲ ತಂಡಗಳೂ ಕಣದಲ್ಲಿವೆ. ನಾವೆಲ್ಲದ್ದಕ್ಕೂ ತಯಾರಾಗಿದ್ದೇವೆ. ಆಟಗಾರರು ಉತ್ತಮ ಲಯದಲ್ಲಿದ್ದಾರೆ’ ಎಂದು 26 ವರ್ಷದ ಸತ್ಯನ್‌ ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಇಲ್ಲಿ ತರಬೇತಿ ಶಿಬಿರದ ನಂತರ ಭಾರತದ ಆಟಗಾರರು ಜರ್ಮನಿಯ ಡಸೆಲ್‌ಡೋರ್ಫ್‌ನಲ್ಲಿ ಜನವರಿ 13 ರಿಂದ 20ರವರೆಗೆ ತರಬೇತಿ ಪಡೆಯಲಿದ್ದಾರೆ. ಸತ್ಯನ್‌, ಜೊತೆ ಶರತ್‌, ಹರ್ಮೀತ್‌ ದೇಸಾಯಿ ಮತ್ತಿತರರು ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಸದ್ಯ ವಾರದ ಕಾಲ ತರಬೇತಿಯಲ್ಲಿದ್ದಾರೆ. ಇದಕ್ಕೆ ಮೊದಲು ಸತ್ಯನ್, ದಕ್ಷಿಣ ಕೊರಿಯಾದಲ್ಲಿ ಅಲ್ಲಿನ ಪ್ರಮುಖ ಆಟಗಾರರ ಜೊತೆ ತರಬೇತಿ ಪಡೆದಿದ್ದರು.

‘ಅಲ್ಲಿನ (ದಕ್ಷಿಣ ಕೊರಿಯಾ) ತರಬೇತಿ ಉತ್ತಮವಾಗಿತ್ತು. ಅಲ್ಲಿನ ಪ್ರಮುಖ ಆಟಗಾರರ ಜೊತೆ ಸೂಕ್ತ ರೀತಿಯಲ್ಲಿ ತರಬೇತಿ ದೊರೆಯಿತು. ಕೊರಿಯನ್‌ ನ್ಯಾಷನಲ್‌ ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಸೌಲಭ್ಯಗಳು ಶ್ರೇಷ್ಠ ದರ್ಜೆಯದು’ ಎಂದು ಸತ್ಯನ್‌ ಹೇಳಿದರು. ಸತ್ಯನ್‌, ಬುಧವಾರ ಜರ್ಮನಿಗೆ ತೆರಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.