ನವದೆಹಲಿ: ಕ್ರೀಡಾ ಉಡುಪು ತಯಾರಿಕಾ ಕಂಪನಿ ಲಿ ನಿಂಗ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದಿರುವ ಹಿನ್ನೆಲೆಯಲ್ಲಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ.
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ದೇಶದ ಕ್ರೀಡಾಪಟುಗಳು ಧರಿಸುವ ಪೋಷಾಕನ್ನು ಲಿ ನಿಂಗ್ ಪ್ರಾಯೋಜಿಸಿತ್ತು. ಕೆಳೆದ ವಾರ ನಡೆದ ಸಮಾರಂಭದಲ್ಲಿ ಇದನ್ನು ಬಿಡುಗಡೆ ಮಾಡಲಾಗಿತ್ತು. ಇದು ಚೀನಾ ಕಂಪನಿಯಾಗಿರುವುದರಿಂದ ಸಾರ್ವಜನಿಕರಿಂದ ಠೀಕೆ ವ್ಯಕ್ತವಾಗಿತ್ತು. ಹೀಗಾಗಿ ಮಂಗಳವಾರ ಒಪ್ಪಂದ ರದ್ದು ಮಾಡಲಾಗಿತ್ತು. ಯಾವುದೇ ಕಂಪನಿಯ ಹೆಸರಿಲ್ಲದ ಪೋಷಾಕನ್ನು ಕ್ರೀಡಾಪಟುಗಳು ಧರಿಸಲಿದ್ದಾರೆ ಎಂದು ಐಒಎ ಹೇಳಿತ್ತು.
ಆದರೆ ಬುಧವಾರ ಹೇಳಿಕೆ ನೀಡಿರುವ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ ಜೂನ್ ತಿಂಗಳ ಅಂತ್ಯದೊಳಗೆ ಹೊಸ ಕಂಪನಿಯೊಂದಿಗೆ ಒಪ್ಪಂದ ಮಾಡಲಾಗುವುದು ಎಂದು ತಿಳಿಸಿದ್ದಾರೆ.
‘ಸಮಯ ಬಹಳ ಕಡಿಮೆ ಇದೆ. ಆದರೂ ಬೇರೊಂದು ಕಂಪನಿಯ ಹುಡುಕಾಟದಲ್ಲಿದ್ದೇವೆ. ಯಾರ ಮೇಲೆಯೂ ಒತ್ತಡ ಹಾಕುತ್ತಿಲ್ಲ. ಯಾರೂ ಮುಂದೆ ಬಂದಿಲ್ಲ ಎಂದಾದರೆ ಪ್ರಾಯೋಜಕತ್ವವಿಲ್ಲದ ಪೋಷಾಕು ತೊಟ್ಟುಕೊಂಡು ದೇಶದ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ ತಿಳಿಸಿದ್ದಾರೆ.
‘ಯಾವುದೇ ಕಂಪನಿಯ ಹೆಸರು ಹೇಳಲು ಬಯಸುವುದಿಲ್ಲ. ಆದರೆ ಒಪ್ಪಂದದ ವಿಷಯ ತಿಳಿದ ಕೂಡಲೇ ಜನರು ಆಕ್ಷೇಪ ವ್ಯಕ್ತಪಡಿಸಲು ಆರಂಭಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಭಾವನೆಗಳಿಗೆ ಬೆಲೆ ನೀಡಿ ಒಪ್ಪಂದವನ್ನು ಹಿಂತೆಗೆದುಕೊಳ್ಳಲಾಗಿದೆ’ ಎಂದು ಬಾತ್ರಾ ಹೇಳಿದರು.
ಕಳೆದ ವರ್ಷ ಲಡಾಖ್‌ನಲ್ಲಿ ಚೀನಾ ತಗಾದೆ ತೆಗೆದ ನಂತರ ಭಾರತದಲ್ಲಿ ಚೀನಾ ಉತ್ಪನ್ನಗಳ ಬಳಕೆ ಮೇಲೆ ನಿಷೇಧ ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.