ADVERTISEMENT

ಪ್ರಶಸ್ತಿ ಜಯಿಸುವರೇ ಸಿಂಧು

ಇಂದಿನಿಂದ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಸೈನಾ ಅಲಭ್ಯ

ಪಿಟಿಐ
Published 25 ಮಾರ್ಚ್ 2019, 18:30 IST
Last Updated 25 ಮಾರ್ಚ್ 2019, 18:30 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ : ಈ ಋತುವಿನಲ್ಲಿ ಪರಿಣಾಮಕಾರಿ ಆಟ ಆಡಲು ಪರದಾಡುತ್ತಿರುವ ಪಿ.ವಿ.ಸಿಂಧು ಮಂಗಳವಾರದಿಂದ ನಡೆಯುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವರೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು, ಹೋದ ವರ್ಷದ ಡಿಸೆಂಬರ್‌ನಲ್ಲಿ ನಡೆದಿದ್ದ ‌ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ‍ಪ್ರಶಸ್ತಿ ಜಯಿಸಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಜರುಗಿದ್ದ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ಅವರು ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು.

ಇಂಡಿಯಾ ಓಪನ್‌ನಲ್ಲಿ ಟ್ರೋಫಿಗೆ ಮುತ್ತಿಕ್ಕಿ ಹಿಂದಿನ ನಿರಾಸೆಗಳನ್ನು ಮರೆಯಲು ಸಿಂಧುಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಆಲ್‌ ಇಂಗ್ಲೆಂಡ್‌ನಲ್ಲಿ ಚಾಂಪಿಯನ್‌ ಆಗಿದ್ದ ಚೆನ್‌ ಯೂಫಿ ಮತ್ತು ಜಪಾನ್‌ನ ಕೆಲ ಸ್ಪರ್ಧಿಗಳು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಂಧುಗೆ ಅಗ್ರಶ್ರೇಯಾಂಕ ಲಭಿಸಿದೆ. ಈ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಳ್ಳುವರೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ADVERTISEMENT

ಕೆ.ಡಿ.ಜಾಧವ್‌ ಕ್ರೀಡಾಂಗಣದಲ್ಲಿ ನಡೆಯುವ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸಿಂಧು, ಭಾರತದವರೇ ಆದ ಮುಗ್ಧಾ ಆಗ್ರೇಯ ಎದುರು ಆಡಲಿದ್ದಾರೆ.

ಸೈನಾ ನೆಹ್ವಾಲ್‌, ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವೃಷಾಲಿ ಗುಮ್ಮಾಡಿ ಮತ್ತು ಸಾಯಿ ಉತ್ತೇಜಿತಾ ರಾವ್‌ ಚುಕ್ಕಾ ಅವರೂ ಮಹಿಳಾ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಭಾರತದ ಭರವಸೆಯಾಗಿದ್ದಾರೆ. ಗುಂಟೂರಿನ 26 ವರ್ಷದ ಆಟಗಾರ, ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ವಿಂಗ್‌ ಕಿ ವಿನ್ಸೆಂಟ್‌ ಎದುರು ಸೆಣಸಲಿದ್ದಾರೆ.

ಐದನೇ ಶ್ರೇಯಾಂಕದ ಆಟಗಾರ ಸಮೀರ್‌ ವರ್ಮಾ, ಡೆನ್ಮಾರ್ಕ್‌ನ ರಸ್ಮಸ್‌ ಗೆಮ್ಕೆ ಎದುರು ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ.

ಬಿ. ಸಾಯಿ ಪ್ರಣೀತ್‌, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಹೋರಾಡಲಿದ್ದಾರೆ. ಆರ್‌.ಎಂ.ವಿ. ಗುರುಸಾಯಿದತ್‌ಗೆ ಆರಂಭಿಕ ಸುತ್ತಿನಲ್ಲಿ ಥಾಯ್ಲೆಂಡ್‌ನ ಸಿತ್ತಿಕೋಮ್‌ ಥಾಮಸಿನ್‌ ಸವಾಲು ಎದುರಾಗಲಿದೆ.

ಎಚ್‌.ಎಸ್‌.ಪ್ರಣಯ್‌, ಶುಭಂಕರ್‌ ಡೇ, ಪರುಪಳ್ಳಿ ಕಶ್ಯಪ್‌ ಮತ್ತು ಅಜಯ್‌ ಜಯರಾಮ್‌ ಅವರೂ ಗುಣಮಟ್ಟದ ಆಟ ಆಡಿ ಪ್ರಶಸ್ತಿಗೆ ಮುತ್ತಿಕ್ಕುವ ಹುಮ್ಮಸ್ಸಿನಲ್ಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ ಅವರು ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಮೇಘನಾ ಜಕ್ಕಂಪುಡಿ ಮತ್ತು ಪೂರ್ವಿಶಾ ಎಸ್‌.ರಾಮ್‌ ಅವರೂ ಅಂಗಳಕ್ಕಿಳಿಯಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಮೈದಾನಕ್ಕಿಳಿಯಲಿದ್ದು, ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಶ್ಲೋಕ್‌ ಅವರೂ ಪ್ರಶಸ್ತಿಯ ಕನವರಿಕೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.