ADVERTISEMENT

ರೇಸಿಂಗ್‌ ಲೋಕದ ಪ್ರತಿಭಾನ್ವಿತ ಅಖಿಲ್ ರವೀಂದ್ರ

ಜಿ.ಶಿವಕುಮಾರ
Published 2 ಅಕ್ಟೋಬರ್ 2020, 4:38 IST
Last Updated 2 ಅಕ್ಟೋಬರ್ 2020, 4:38 IST
ಅಖಿಲ್ ರವೀಂದ್ರ
ಅಖಿಲ್ ರವೀಂದ್ರ   

ಬೆಂಗಳೂರು: ಮೋಟರ್‌ ರೇಸಿಂಗ್‌ ಅಂದಾಕ್ಷಣ ಥಟ್ಟನೆ ನೆನಪಾಗುವುದು ಮೈಕಲ್‌ ಶುಮಾಕರ್‌, ಲೂಯಿಸ್‌ ಹ್ಯಾಮಿಲ್ಟನ್‌ ಮತ್ತು ಸೆಬಾಸ್ಟಿಯನ್‌ ವೆಟಲ್‌. ಫಾರ್ಮುಲಾ ಒನ್‌ ಲೋಕದ ದಂತಕತೆಗಳೆಂದೇ ಕರೆಯಲ್ಪಡುವ ಇವರು ಶರವೇಗದ ಚಾಲನೆಯ ಮೂಲಕ ಕೋಟ್ಯಂತರ ರೇಸ್‌ ಪ್ರಿಯರ ಮನ ಗೆದ್ದವರು.

ಅತ್ಯಂತ ಅಪಾಯಕಾರಿ ಎನಿಸಿದ ಓರೆ ಕೋರೆಯಾಕಾರದ ಟ್ರ್ಯಾಕ್‌ಗಳಲ್ಲಿ ಜೀವದ ಹಂಗು ತೊರೆದು ಕಾರು ಚಲಾಯಿಸುವ ಮೂಲಕ ಅಭಿಮಾನಿಗಳ ಹೃದಯ ಸಾಮ್ರಾಟರಾದವರು. ಈ ದಿಗ್ಗಜರ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ಕರ್ನಾಟಕದ ಪ್ರತಿಭೆ ಅಖಿಲ್‌ ರವೀಂದ್ರನ್‌.

ಬೆಂಗಳೂರಿನ 23 ವರ್ಷ ವಯಸ್ಸಿನ ಅಖಿಲ್‌, ಕಠಿಣ ಪರಿಶ್ರಮದಿಂದ ಸಾಧನೆಯ ಶಿಖರವೇರುವತ್ತ ಸಾಗುತ್ತಿದ್ದಾರೆ. ಪ್ರತಿಷ್ಠಿತ ಆ್ಯಷ್ಟನ್‌ ಮಾರ್ಟಿನ್‌ ರೇಸಿಂಗ್‌ ಡ್ರೈವರ್‌ ಅಕಾಡೆಮಿಗೆ ಪುನರಾಯ್ಕೆಯಾದ ಏಷ್ಯಾದ ಮೊದಲ ಚಾಲಕ ಎಂಬ ಹಿರಿಮೆ ಹೊಂದಿರುವ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ADVERTISEMENT

* ನಿಮ್ಮ ರೇಸಿಂಗ್‌ ಪಯಣ ಶುರುವಾಗಿದ್ದು ಹೇಗೆ?
2010ರ ಮಾತು. ಆಗ ಬೆಂಗಳೂರಿನಲ್ಲಿದ್ದೆ (ಸದ್ಯ ಫ್ರಾನ್ಸ್‌ನಲ್ಲಿ ನೆಲೆಸಿದ್ದಾರೆ). ಮನರಂಜನೆಗಾಗಿ ಗೋ ಕಾರ್ಟಿಂಗ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಾನು ಎಲ್ಲರನ್ನೂ ಸುಲಭವಾಗಿ ಹಿಂದಿಕ್ಕುತ್ತಿದ್ದೆ. ಅದು ನನ್ನಲ್ಲಿ ಹೊಸ ಹುರುಪು ಮೂಡುವಂತೆ ಮಾಡಿತು. ಬಳಿಕ ಗೋ ಕಾರ್ಟಿಂಗ್‌ ಅನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಸಾಧನೆ ಮಾಡುವ ಪಣ ತೊಟ್ಟೆ. ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ನಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದೆ. ನಂತರ ಫಾರ್ಮುಲಾ ರೇಸಿಂಗ್‌ನತ್ತ ಹೊರಳಿದೆ. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಬಂದ ಬಳಿಕ ಫಾರ್ಮುಲಾ–4, ಫಾರ್ಮುಲಾ–3 ಸ್ಪರ್ಧೆಗಳಲ್ಲಿ ತೊಡಗಿಕೊಂಡೆ. ಈಗ ಜಿಟಿ ರೇಸಿಂಗ್‌ನತ್ತ ಚಿತ್ತ ನೆಟ್ಟಿದ್ದೇನೆ.

*ಆ್ಯಷ್ಟನ್‌ ಮಾರ್ಟಿನ್‌ ರೇಸಿಂಗ್‌ ಡ್ರೈವರ್‌ ಅಕಾಡೆಮಿಗೆ ಪುನರಾಯ್ಕೆಯಾದ ಏಷ್ಯಾದ ಮೊದಲ ಚಾಲಕ ಎಂಬ ಹಿರಿಮೆ ನಿಮ್ಮದು. ಈ ಸಾಧನೆ ಬಗ್ಗೆ ಹೇಳಿ?
ಈ ಸಾಧನೆಯು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಅಲ್ಲಿ ಸಾಕಷ್ಟು ಮಂದಿ ಹಿರಿಯ ಚಾಲಕರಿದ್ದಾರೆ. ಅವರಿಂದ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಸದ್ಯ ಅಕಾಡೆಮಿ ಚಾಲಕನಾಗಿದ್ದೇನೆ. ಜೂನಿಯರ್‌ ಡ್ರೈವರ್ ಆಗಿ ಪದೋನ್ನತಿ ಹೊಂದಬೇಕೆಂಬ‌ ಆಸೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.

*ಡ್ಯಾಷ್ ಮತ್ತು ಎಂಡ್ಯೂರೆನ್ಸ್‌ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುತ್ತೀರಿ. ಇವೆರಡಕ್ಕೂ ಇರುವ ಭಿನ್ನತೆ ಏನು?
ಸ್ಪ್ರಿಂಟ್‌ ರೇಸ್‌ (ಡ್ಯಾಷ್‌) ಟ್ವೆಂಟಿ–20 ಕ್ರಿಕೆಟ್‌ ಇದ್ದ ಹಾಗೆ. ಒಂದು ಗಂಟೆಯ ಈ ರೇಸ್‌ನಲ್ಲಿ ಇಬ್ಬರು ಚಾಲಕರು ಪಾಲ್ಗೊಳ್ಳುತ್ತೇವೆ. ಈ ಪೈಕಿ ಒಬ್ಬರು ರೇಸ್‌ ಆರಂಭಿಸಬೇಕು. ಮತ್ತೊಬ್ಬರು ರೇಸ್‌ ಪೂರ್ಣಗೊಳಿಸಬೇಕು. 25 ರಿಂದ 35 ನಿಮಿಷಗಳೊಳಗೆ ಚಾಲಕ ಬದಲಾಗಬೇಕು. ಅದಕ್ಕಿರುವ ಕಾಲಾವಕಾಶ ಕೇವಲ ಒಂದು ನಿಮಿಷ. ಇಲ್ಲಿ ಪ್ರತಿಯೊಂದು ಲ್ಯಾಪ್‌ ಕೂಡ ಮಹತ್ವದ್ದಾಗಿರುತ್ತದೆ. ಆದರೆ ಎಂಡ್ಯೂರೆನ್ಸ್‌ ರೇಸ್‌ ಹಾಗಲ್ಲ. ಅದು ಏಕದಿನ ಪಂದ್ಯವಿದ್ದಂತೆ. ಅದರ ಚಾಲನಾ ವೈಖರಿಯೇ ಭಿನ್ನವಾಗಿರುತ್ತದೆ. ಇದರಲ್ಲಿ ಸ್ಥಿರತೆ ಬಹಳ ಮುಖ್ಯ. ಹೆಚ್ಚು ಇಂಧನ ವ್ಯಯ ಹಾಗೂ ಕಾರಿನ ಟಯರ್‌ಗೆ ಹಾನಿಯಾಗದ ಹಾಗೆ ಎಚ್ಚರ ವಹಿಸುವುದು ಅವಶ್ಯ.

*ರೇಸಿಂಗ್‌ ತುಂಬಾ ದುಬಾರಿ ಕ್ರೀಡೆ. ಇದಕ್ಕೆ ತಗಲುವ ವೆಚ್ಚವನ್ನು ಹೇಗೆ ಸರಿದೂಗಿಸುತ್ತೀರಿ?
ಫುಟ್‌ಬಾಲ್‌ ಅಥವಾ ಕ್ರಿಕೆಟ್‌ ಆಟಗಳನ್ನು ಗಲ್ಲಿಗಳಲ್ಲೂ ಆಡಬಹುದು. ಆದರೆ ರೇಸಿಂಗ್‌ ಹಾಗಲ್ಲ. ಅದಕ್ಕೆ ಸುಸಜ್ಜಿತವಾದ ಟ್ರ್ಯಾಕ್‌ ಇರಬೇಕು. ಇದಕ್ಕೆ ಬಳಸುವ ಕಾರಿನ ಬೆಲೆ ತುಂಬಾ ದುಬಾರಿ. ಅದನ್ನು ಕೊಂಡುಕೊಳ್ಳುವುದೂ ಕಷ್ಟ. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟಶಾಲಿ. ಮನೆಯವರು ಹಾಗೂ ಪ್ರಾಯೋಜಕರ ಬೆಂಬಲ ಸಿಕ್ಕಿದೆ. ಹೀಗಾಗಿ ನಿರಾತಂಕವಾಗಿಯೇ ಸಾಧನೆಯ ಶಿಖರದತ್ತ ಸಾಗುತ್ತಿದ್ದೇನೆ.

*ನಿಮ್ಮ ಅಭ್ಯಾಸ ಹೇಗಿರುತ್ತದೆ?
ರೇಸ್‌ಗೂ ಮುನ್ನ ಸಿಮ್ಯುಲೇಟರ್‌ನಲ್ಲಿ ಅಭ್ಯಾಸ ಮಾಡುತ್ತೇವೆ. ಟ್ರ್ಯಾಕ್‌ನಲ್ಲೂ ತಾಲೀಮು ನಡೆಸುತ್ತೇವೆ. ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.

*ಕರ್ನಾಟಕದಲ್ಲಿ ಮೋಟರ್‌ ರೇಸಿಂಗ್‌ ಬೆಳವಣಿಗೆ ಹೇಗಿದೆ.
ಕರ್ನಾಟಕದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಚಾಲಕರಿದ್ದಾರೆ. ಬೆಂಗಳೂರಿನಲ್ಲಿ ಸುಸಜ್ಜಿತ ಗೋ ಕಾರ್ಟಿಂಗ್‌ ಟ್ರ್ಯಾಕ್‌ಗಳಿವೆ. ಅವುಗಳಲ್ಲಿ ಸಾಕಷ್ಟು ಮಂದಿ ತಾಲೀಮು ನಡೆಸುವುದನ್ನು ನೋಡಿದ್ದೇನೆ. ಕಾರ್‌ ರೇಸಿಂಗ್‌ಗೆ ಅಗತ್ಯವಿರುವ ಉನ್ನತ ಗುಣಮಟ್ಟದ ಟ್ರ್ಯಾಕ್ ನಿರ್ಮಿಸುತ್ತಾರೆ ಎಂಬ ಸುದ್ದಿಯೂ ಇದೆ. ಹಾಗೊಮ್ಮೆ ಟ್ರ್ಯಾಕ್‌ ನಿರ್ಮಾಣಗೊಂಡರೆ ನಮ್ಮ ರಾಜ್ಯದಿಂದಲೂ ವಿಶ್ವಶ್ರೇಷ್ಠ ಚಾಲಕರು ಪ್ರವರ್ಧಮಾನಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ.

*ಮುಂದಿನ ಚಾಂಪಿಯನ್‌ಷಿಪ್‌ಗಳ ಬಗ್ಗೆ ಹೇಳಿ?
ಈ ವರ್ಷ ಫ್ರೆಂಚ್‌ ಜಿಟಿ–4 ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಅದು ಐದು ಸುತ್ತುಗಳ ಚಾಂಪಿಯನ್‌ಷಿಪ್‌. ಈ ಪೈಕಿ ಎರಡು ಸುತ್ತುಗಳು ಮುಕ್ತಾಯವಾಗಿವೆ. ಇನ್ನು ಎರಡು ಸುತ್ತಿನ ಸ್ಪರ್ಧೆಗಳು ಅಕ್ಟೋಬರ್‌ನಲ್ಲಿ ನಿಗದಿಯಾಗಿದೆ. ಅಂತಿಮ ಸುತ್ತಿನ ಸ್ಪರ್ಧೆ ನವೆಂಬರ್‌ ಮೊದಲ ವಾರ ನಡೆಯುತ್ತದೆ. ಮುಂದಿನ ವರ್ಷ ನಡೆಯುವ ಜಿಟಿ–3 ಚಾಂಪಿಯನ್‌ಷಿಪ್‌ನ ಮೇಲೆ ಕಣ್ಣಿಟ್ಟಿದ್ದೇನೆ. ಅಲ್ಲಿ ಸ್ಪರ್ಧೆ ತುಂಬಾ ಕಠಿಣವಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ತಯಾರಿ ನಡೆಸುತ್ತಿದ್ದೇನೆ.

*ರೇಸಿಂಗ್‌ ಮತ್ತು ಶಿಕ್ಷಣ. ಇವೆರಡಕ್ಕೂ ಹೇಗೆ ಸಮಯ ಮೀಸಲಿಡುತ್ತಿದ್ದೀರಿ?
ಎಂಟನೆ ವಯಸ್ಸಿನಿಂದಲೇ ರೇಸಿಂಗ್‌ನಲ್ಲಿ ತೊಡಗಿಕೊಂಡಿದ್ದೇನೆ. ಆರಂಭದಲ್ಲಿ ಎರಡಕ್ಕೂ ಸಮಯ ಮೀಸಲಿಡುವುದು ತುಂಬಾ ಕಷ್ಟವಾಗಿತ್ತು. ಸ್ನೇಹಿತರೊಂದಿಗೆ ಬೆರೆಯಲೂ ಆಗುತ್ತಿರಲಿಲ್ಲ. ಕ್ರಮೇಣ ಅದು ಅಭ್ಯಾಸವಾಗುತ್ತಾ ಹೋಯಿತು. ಮನೆಯವರು ಹಾಗೂ ಶಿಕ್ಷಕರು ಪ್ರತಿ ಹಂತದಲ್ಲೂ ಸಹಕಾರ ನೀಡುತ್ತಾ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.