ಅಂತ್ಯಾಲ, ಟರ್ಕಿ: ಧೀರಜ್ ಬೊಮ್ಮದೇವರ ಮತ್ತು ಭಜನ್ ಕೌರ್ ಅವರನ್ನು ಒಳಗೊಂಡ ಭಾರತದ ರೀಕರ್ವ್ ಮಿಶ್ರ ತಂಡ ಭಾನುವಾರ ಇಲ್ಲಿ ನಡೆದ ಆರ್ಚರಿ ಮೂರನೇ ಹಂತದ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ ತಂಡವು 5–3ರಿಂದ ಮೆಕ್ಸಿಕೊದ ಅಲೆಜಾಂಡ್ರಾ ವೇಲೆನ್ಸಿಯಾ ಮತ್ತು ಮಟಿಯಾಸ್ ಗ್ರಾಂಡೆ ಅವರನ್ನು ಸೋಲಿಸಿತು. 0–2ರಿಂದ ಹಿನ್ನಡೆಯಲ್ಲಿದ್ದ ಭಾರತದ ಬಿಲ್ಗಾರರು ನಂತರ ಅಮೋಘ ಆಟ ಪ್ರದರ್ಶಿಸಿ ಗೆಲುವು ಸಾಧಿಸಿದರು.
ಇಲ್ಲಿ ಭಾರತಕ್ಕೆ ಇದು ಮೂರನೇ ಪದಕವಾಗಿದೆ. ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಪರ್ಣೀತ್ ಕೌರ್ ಅವರನ್ನು ಒಳಗೊಂಡ ಭಾರತ ಮಹಿಳಾ ಕಾಂಪೌಂಡ್ ಆರ್ಚರಿ ತಂಡವು ಚಿನ್ನದ ಪದಕ ಮತ್ತು ಪುರುಷರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಿಯಾಂಶ್ ಅವರು ಬೆಳ್ಳಿ ಪದಕವನ್ನು ಶನಿವಾರ ಗೆದ್ದಿದ್ದರು.
ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಕ್ರಮವಾಗಿ ರೀಕರ್ವ್ ಮಹಿಳೆಯರ ಮತ್ತು ಪುರುಷರ ವಿಭಾಗದ ವೈಯಕ್ತಿಕ ಸ್ಪರ್ಧೆಯ ಸೆಮಿಫೈನಲ್ ತಲುಪಿದ್ದು, ಭಾರತ ಇನ್ನೂ ಎರಡು ಪದಕಗಳ ನಿರೀಕ್ಷೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.