ನವದೆಹಲಿ: ಭಾರತದ ಶೂಟರ್‌ಗಳು ಮತ್ತು ಆರ್ಚರಿ ಸ್ಪರ್ಧಿಗಳು ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಸೋಮವಾರ ನಾಲ್ಕು ಚಿನ್ನ ಸೇರಿದಂತೆ ಆರು ಪದಕಗಳನ್ನು ತಂದಿತ್ತರು.
ಐಶ್ವರ್ಯ ಪ್ರತಾಪ್ ಸಿಂಗ್, ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಅರ್ಜುನ್ ಬಬೂತ ಅವರನ್ನೊಳಗೊಂಡ ತಂಡ ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. ಭಾರತ ತಂಡ (1,894.1) ಫೈನಲ್‌ನಲ್ಲಿ ಚೀನಾ (1881.9) ವಿರುದ್ದ ಜಯಿಸಿತು.
10 ಮೀ. ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯ ಪ್ರತಾಪ್ ಚಿನ್ನ ಗೆದ್ದರೆ, ದಿವ್ಯಾಂಶ್ ಬೆಳ್ಳಿ ಪಡೆದುಕೊಂಡರು.
ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು ಎರಡು ಚಿನ್ನ ಮತ್ತು ಒಂದು ಕಂಚು ಜಯಿಸಿದರು. ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಅವನೀತ್ ಕೌರ್ ಅಮೆರಿಕದ ಅಲಿಸಾ ಗ್ರೇಸ್ ಸ್ಟರ್ಗಿಲ್ ಅವರನ್ನು ಮಣಿಸಿ ಅಗ್ರಸ್ಥಾನ ಪಡೆದುಕೊಂಡರು.
ಚಿನ್ನದ ಪದಕ್ಕಕಾಗಿ ನಡೆದ ಪೈಪೋಟಿಯು 144–144 ರಿಂದ ಸಮಬಲದಲ್ಲಿ ಕೊನೆಗೊಂಡ ಕಾರಣ ‘ಶೂಟ್ ಆಫ್’ ಮೊರೆ ಹೋಗಲಾಯಿತು. ‘ಶೂಟ್‌ಆಫ್’ನಲ್ಲಿ ಅಲಿಸಾ 8 ಪಾಯಿಂಟ್ಸ್ ಗಳಿಸಿದರೆ, ಅವನೀತ್ 10 ಪಾಯಿಂಟ್ಸ್ ಕಲೆಹಾಕಿ ಚಿನ್ನ ತಮ್ಮದಾಗಿಸಿಕೊಂಡರು.
ಪುರುಷರ ವೈಯಕ್ತಿಕ ವಿಭಾಗದಲ್ಲಿ ಸಂಗಮ್‌ಪ್ರೀತ್ ಬಿಸ್ಲಾ ಮತ್ತು ಅಮನ್ ಸೈನಿ ಅವರು ಕ್ರಮವಾಗಿ ಚಿನ್ನ ಹಾಗೂ ಕಂಚು ಪಡೆದುಕೊಂಡರು.
ಚಿನ್ನ ಗೆಲ್ಲಲು ಕೊನೆಯ ಅವಕಾಶದಲ್ಲಿ 9 ಪಾಯಿಂಟ್ಸ್ ಗಳಿಸಬೇಕಿದ್ದ ಸಂಗಮ್‌ಪ್ರೀತ್, ನಿಖರ ಗುರಿ ಹಿಡಿದು 10 ಪಾಯಿಂಟ್ಸ್ ಕಲೆಹಾಕಿದರು. ಕಂಚಿನ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಅಮನ್ 148–146 ರಿಂದ ಫ್ರಾನ್ಸ್‌ನ ಬೊಲೀಯು ವಿಕ್ಟರ್ ವಿರುದ್ಧ ಗೆದ್ದರು.
9 ಚಿನ್ನ ಸೇರಿದಂತೆ ಒಟ್ಟು 17 ಪದಕ ಗೆದ್ದುಕೊಂಡಿರುವ ಭಾರತ ತಂಡ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಕೊರಿಯಾ ಮತ್ತು ಜಪಾನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.