ADVERTISEMENT

ವಿಶ್ವ ಜೂನಿಯರ್ ಶೂಟಿಂಗ್ | ಮಿಶ್ರ ವಿಭಾಗ: ಭಾರತಕ್ಕೆ ಮತ್ತೆರಡು ಕಂಚು

ಪಿಟಿಐ
Published 30 ಸೆಪ್ಟೆಂಬರ್ 2024, 12:40 IST
Last Updated 30 ಸೆಪ್ಟೆಂಬರ್ 2024, 12:40 IST
<div class="paragraphs"><p>ಶೂಟಿಂಗ್ ( ಸಾಂದರ್ಭಿಕ ಚಿತ್ರ)</p></div>

ಶೂಟಿಂಗ್ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಭಾರತ ರೈಫಲ್ ಮತ್ತು ಪಿಸ್ತೂಲ್‌ ಶೂಟರ್‌ಗಳು, ಪೆರು ರಾಜಧಾನಿ ಲಿಮಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ 10ಮೀ. ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾನುವಾರ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಭಾರತ ಈ ಮೂಲಕ ಕೂಟದಲ್ಲಿ ಐದು ಪದಕಗಳನ್ನು (ಎರಡು ಚಿನ್ನ, ಮೂರು ಕಂಚು) ಗೆದ್ದುಕೊಂಡಂತೆ ಆಗಿದೆ. ಐಎಸ್‌ಎಸ್‌ಎಫ್‌ನ ಪೂರ್ಣ ರೂಪ ಇಂಟರ್‌ನ್ಯಾಷನಲ್‌ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್‌.

ADVERTISEMENT

ರೈಫಲ್ ಶೂಟಿಂಗ್‌ನಲ್ಲಿ ಗೌತಮಿ ಭಾನೊಟ್ ಮತ್ತು ಅಜಯ್ ಮಲಿಕ್ ಅವರನ್ನೊಳಗೊಂಡ ತಂಡ 628.09 ಸ್ಕೋರ್‌ನೊಡನೆ 34 ಜೋಡಿ ಸ್ಪರ್ಧಿಗಳ ಪೈಕಿ ಮೂರನೇ ಸ್ಥಾನ ಪಡೆದು ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಳಿಸಿತು.

ಭಾರತದ ಜೋಡಿ, ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಕ್ರೊವೇಷ್ಯಾದ ಅನಾಮರಿಯಾ ಟರ್ಕ್ ಮತ್ತು ದಾರ್ಕೊ ಟೊಮೊಸೆವಿಕ್‌ ಜೋಡಿಯನ್ನು 17–9 ರಿಂದ ಸೋಲಿಸಿತು. ಚೀನಾ ಮತ್ತು ಫ್ರಾನ್ಸ್‌ ಜೋಡಿಗಳು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದವು.

ಕಣದಲ್ಲಿದ್ದ ಭಾರತದ ಅಭಿನವ್ ಶಾ ಮತ್ತು ಶಾಂಭವಿ ಕ್ಷೀರಸಾಗರ ಜೋಡಿ (628.1) ಆರನೇ ಸ್ಥಾನ ಪಡೆಯಿತು.

ಪಿಸ್ತೂಲ್ ವಿಭಾಗ:

ಮಿಶ್ರ ಪಿಸ್ತೂಲ್ ವಿಭಾಗದಲ್ಲಿ ಭಾರತದ ಜೋಡಿಗಳು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆದವು. ಲಕ್ಷಿತಾ ಮತ್ತು ಪ್ರಮೋದ್ ಅಂತಿಮವಾಗಿ ಕಂಚಿನ ಪದಕ ಗೆದ್ದುಕೊಂಡರು. ಇವರು ಕನಿಷ್ಕಾ ದಾಗರ್– ಮುಕೇಶ್‌ ನೆಲವಲಿ ಜೋಡಿಯನ್ನು 16–8 ರಿಂದ ಸೋಲಿಸಿದರು.

ಜರ್ಮನಿ ತಂಡ ಚಿನ್ನ ಗೆದ್ದರೆ, ಉಕ್ರೇನ್ ಜೋಡಿ ರಜತ ಗೆದ್ದುಕೊಂಡಿತು. ಇದು ಈ ಕೂಟದಲ್ಲಿ ಲಕ್ಷಿತಾ ಗೆಲ್ಲುತ್ತಿರುವ ಎರಡನೇ ಪದಕ. ಅವರು ಶನಿವಾರ ನಡೆದ ಏರ್‌ ಪಿಸ್ತೂಲ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.