ADVERTISEMENT

ಬ್ಯಾಡ್ಮಿಂಟನ್‌ಗೆ ಸಾಯಿ ಪ್ರಣೀತ್ ವಿದಾಯ

ಅಮೆರಿಕ ಕ್ಲಬ್ ಮುಖ್ಯ ತರಬೇತುದಾರನಾಗಿ ಹೊಸ ಇನಿಂಗ್ಸ್‌

ಪಿಟಿಐ
Published 4 ಮಾರ್ಚ್ 2024, 19:30 IST
Last Updated 4 ಮಾರ್ಚ್ 2024, 19:30 IST
ಸಾಯಿ ಪ್ರಣೀತ್
ಸಾಯಿ ಪ್ರಣೀತ್   

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಬಿ. ಸಾಯಿ ಪ್ರಣೀತ್‌ ಸೋಮವಾರ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಿಸಿದರು. ಸಿಂಗಪುರ ಓಪನ್ ಗೆದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಟೋಕಿಯೊ ಕ್ರೀಡಾಕೂಟದ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹೈದರಾಬಾದ್‌ನ 31 ವರ್ಷದ ಆಟಗಾರ, ಬ್ಯಾಡ್ಮಿಂಟನ್‌ಗೆ ವಿದಾಯ ಹೇಳಲು ನಿರ್ಧರಿಸಿದರು.

‘24 ವರ್ಷಗಳಿಂದ ನನ್ನ ಜೀವನಾಡಿ ಆಗಿರುವ ಕ್ರೀಡೆಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇಲ್ಲಿಯವರೆಗಿನ ಪ್ರಯಾಣಕ್ಕಾಗಿ ಕೃತಜ್ಞತೆ ಹೇಳುತ್ತೇನೆ’ ಎಂದು ಸಾಯಿ ಪ್ರಣೀತ್‌ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಬ್ಯಾಡ್ಮಿಂಟನ್ ನನ್ನ ಮೊದಲ ಪ್ರೀತಿ, ನಿರಂತರ ಒಡನಾಡಿ. ನನ್ನ ಪಾತ್ರವನ್ನು ರೂಪಿಸುವುದು ಮತ್ತು ನನ್ನ ಅಸ್ತಿತ್ವಕ್ಕೆ ಉದ್ದೇಶವನ್ನು ನೀಡುವುದು. ಹಂಚಿಕೊಂಡ ನೆನಪುಗಳು, ಜಯಿಸಿದ ಸವಾಲುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ’ ಎಂದು ಹೇಳಿದ್ದಾರೆ. 

ಮುಂದಿನ ತಿಂಗಳು ಅಮೆರಿಕದ ಟ್ರಯಾಂಗಲ್ ಬ್ಯಾಡ್ಮಿಂಟನ್ ಅಕಾಡೆಮಿಯ ಮುಖ್ಯ ತರಬೇತುದಾರರಾಗಿ ಸೇರಲು ಸಜ್ಜಾಗಿರುವ ಪ್ರಣೀತ್, ಹೊಸ ಇನಿಂಗ್ಸ್‌ ಪ್ರಾರಂಭಿಸಲಿದ್ದಾರೆ.

‘ನಾನು ಏಪ್ರಿಲ್‌ನಲ್ಲಿ ಟ್ರಯಾಂಗಲ್ ಬ್ಯಾಡ್ಮಿಂಟನ್‌ ಅಕಾಡೆಮಿ ಮುಖ್ಯ ತರಬೇತುದಾರನಾಗಿ ಸೇರುತ್ತೇನೆ. ಜವಾಬ್ದಾರಿ ವಹಿಸಿಕೊಂಡ ಬಳಿಕ ನನ್ನ ಪಾತ್ರದ ಬಗ್ಗೆ ವಿಸ್ತಾರವಾಗಿ ತಿಳಿಸುತ್ತೇನೆ’ ‌‌ಎಂದು ಪ್ರಣೀತ್ ಸುದ್ದಿಸಂಸ್ಥೆಗೆ ಹೇಳಿದ್ದಾರೆ.  

ಎರಡು ದಶಕಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಪ್ರಣೀತ್ ಕೆಲವು ಉತ್ತಮ ಕ್ಷಣಗಳನ್ನು ಹೊಂದಿದ್ದರು. 2017ರ ಸಿಂಗಪುರ್ ಓಪನ್ ಸೂಪರ್ ಸೀರೀಸ್‌ ಗೆಲುವು ಮತ್ತು ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ರಣೀತ್ ಅವರು ವಿಶ್ವದ 10ನೇ ಶ್ರೇಯಾಂಕ ತಲುಪಿದರು ಮತ್ತು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಆದರೆ, ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಎಲ್ಲಾ ಪಂದ್ಯಗಳನ್ನು ಸೋತು ಗ್ರೂಪ್ ಹಂತದಲ್ಲೇ ನಿರ್ಗಮಿಸಿದರು. 

‘ನನ್ನ ಕುಟುಂಬ, ಅಜ್ಜ–ಅಜ್ಜಿ, ಪೋಷಕರು ಮತ್ತು ಪ್ರೀತಿಯ ಪತ್ನಿ ಶ್ವೇತಾ ಅವರಿಗೆ - ನಿಮ್ಮ ಪ್ರೋತ್ಸಾಹವು ನನ್ನ ಯಶಸ್ಸಿನ ಅಡಿಪಾಯವಾಗಿದೆ. ನಿಮ್ಮ ಅಚಲ ಬೆಂಬಲವಿಲ್ಲದೆ, ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ’ ಎಂದು ಪ್ರಣೀತ್‌ ಹೇಳಿದ್ದಾರೆ. 

‘ಗೋಪಿಚಂದ್ ಅಕಾಡೆಮಿ, ಬಾಲ್ಯದ ತರಬೇತುದಾರರಾದ ಆರಿಫ್ ಮತ್ತು ಗೋವರ್ಧನ್, ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್,  ಸಾಯ್‌ ಹಾಗೂ ಬೆಂಬಲ ನೀಡಿದ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ರೀಡೆಗೆ ನೀವು ನೀಡಿದ ಕೊಡುಗೆಗಳು ನನ್ನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ’ ಎಂದು ತಿಳಿಸಿದ್ದಾರೆ.

ಪ್ರಣೀತ್ 2019 ರಲ್ಲಿ ಸ್ವಿಸ್ ಓಪನ್ ಸೂಪರ್ 300ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಸಾಧನೆಯನ್ನು ಅರ್ಜುನ ಪ್ರಶಸ್ತಿಯೊಂದಿಗೆ ಗುರುತಿಸಲಾಯಿತು.

ಕೋವಿಡ್ 19 ಬಳಿಕ ಅನೇಕ ಗಾಯಗಳು ಅವರನ್ನು ಕಾಡಿದವು. 2022 ರಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು. 

 ರಾಜೀನಾಮೆ: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಸಿಯಾದತುಲ್ಲಾ ಸಿದ್ದಿಕಿ ಅವರು ಗೋಪಿಚಂದ್ ಅಕಾಡೆಮಿಯನ್ನು ತೊರೆದು ಅಮೆರಿಕದ ಒರೆಗಾನ್ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.