ಹಾಂಗ್‌ಝೌ: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಎಚ್.ಎಸ್. ಪ್ರಣಯ್ ಮತ್ತು ಲಕ್ಷ್ಮ ಸೇನ್ ಅವರು ಇಲ್ಲಿ ಮಂಗಳವಾರ ಆರಂಭವಾಗಲಿರುವ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನವನ್ನು ಮುನ್ನಡೆಸಲಿದ್ದಾರೆ.
ಆದರೆ, ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಸೆ.23ರಂದು ಆರಂಭವಾಗುವ ಏಷ್ಯನ್ ಗೇಮ್ಸ್‌ನತ್ತ ಗಮನ ಹರಿಸುವ ಉದ್ದೇಶದಿಂದ ಕಡೆ ಕ್ಷಣದಲ್ಲಿ ಅವರು ಹಿಂದೆ ಸರಿದಿದ್ದು, ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಸ್ಪರ್ಧೆ ಇರುವುದಿಲ್ಲ. ಕಳೆದ ಆವೃತ್ತಿಯ ಏಷ್ಯಾಡ್‌ನಲ್ಲಿ ಸಿಂಧು ಬೆಳ್ಳಿ ಗೆದ್ದಿದ್ದರು.
ಕಳೆದ ತಿಂಗಳು ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ವಿಕ್ಟರ್ ಆಕ್ಸೆಲ್ಸನ್ ಅವರಿಗೆ ಆಘಾತ ನೀಡಿ, ಕಂಚು ಗೆದ್ದಿದ್ದ ಪ್ರಣಯ್ ಉತ್ತಮ ಆಟದ ವಿಶ್ವಾಸದಲ್ಲಿದ್ದಾರೆ. ವೃತ್ತಿಜೀವನದಲ್ಲಿ ಶ್ರೇಷ್ಠ ರ‍್ಯಾಂಕ್ (6ನೇ) ಪಡೆದಿರುವ ಅವರು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಎಂಗ್ ತ್ಸೆ ಯೋಂಗ್ ವಿರುದ್ಧ ಅಭಿಯಾನ ಆರಂಭಿಸುವರು. ಅವರಿಗೆ ಎರಡನೇ ಸುತ್ತಿನಲ್ಲಿ ನಾಲ್ಕನೇ ಕ್ರಮಾಂಕದ ಕುನ್ಲವುತ್ ವಿತಿದ್‌ಸರನ್ (ಥಾಯ್ಲೆಂಡ್) ಎದುರಾಗುವ ಸಾಧ್ಯತೆ ಇದೆ.
ಕಾಮನ್‌ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಲಕ್ಷ್ಯ ಸೇನ್ ಅವರು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್‌ಸೆನ್ ವಿರುದ್ಧ ಸೆಣಸಾಡುವರು.
ಪ್ರಿಯಾಂಶು ರಾಜಾವತ್ ಅವರು ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ ಪೈಪೋಟಿ ನಡೆಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.