ADVERTISEMENT

ಭಾರತ ಸ್ಕೀಟ್ ತಂಡಕ್ಕೆ ಅಗ್ರ ಸ್ಥಾನ

ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌: ಎರಡನೇ ಸ್ಥಾನದಲ್ಲಿ ಗುರುನಿಹಾಲ್‌

ಪಿಟಿಐ
Published 10 ಸೆಪ್ಟೆಂಬರ್ 2018, 14:33 IST
Last Updated 10 ಸೆಪ್ಟೆಂಬರ್ 2018, 14:33 IST

ಚಾಂಗ್ವಾನ್‌, ದಕ್ಷಿಣ ಕೊರಿಯ: ಭಾರತದ ಪುರುಷರ ಜೂನಿಯರ್‌ ಸ್ಕೀಟ್ ತಂಡ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಮೊದಲ ದಿನ ಅಗ್ರ ಸ್ಥಾನ ಗಳಿಸಿದೆ.

ಸೋಮವಾರ ನಡೆದ ಸ್ಪರ್ಧೆಯಲ್ಲಿ ಗುರುನಿಹಾಲ್ ಸಿಂಗ್‌ ಗರ್ಚಾ ಅವರು 73 ಸ್ಕೋರು ಗಳಿಸಿ ಎರಡನೇ ಸ್ಥಾನ ಗಳಿಸಿದರು. 71 ಸ್ಕೋರು ಕಲೆ ಹಾಕಿದ ಅನಂತ್ ಜೀತ್‌ ಸಿಂಗ್‌ ನರೂಕ 11ನೇ ಸ್ಥಾನ ಗಳಿಸಿದರೆ ಆಯುಷ್‌ ರುದ್ರರಾಜು 70 ಸ್ಕೋರುಗಳೊಂದಿಗೆ 12ನೇ ಸ್ಥಾನ ಗಳಿಸಿದರು.

ಈ ಮೂಲಕ ಪಾಯಿಂಟ್‌ ತಂಡವು ಪಟ್ಟಿಯಲ್ಲಿ ಸೈಪ್ರಸ್ ತಂಡವನ್ನು (213 ಸ್ಕೋರು) ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಮಂಗಳವಾರ ಇನ್ನೂ ಎರಡು ಸುತ್ತಿನ ಸ್ಪರ್ಧೆಗಳು ಇವೆ. ವೈಯಕ್ತಿಕ ಫೈನಲ್ ಕೂಡ ನಡೆಯಲಿದೆ.

ADVERTISEMENT

ಭಾನ್ವಾಲಾಗೆ ನಿರಾಸೆ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಅನೀಶ್ ಭಾನ್ವಾಲಾ ನಿರಾಸೆಗೆ ಒಳಗಾದರು. 25 ಮೀಟರ್ಸ್‌ ರ‍್ಯಾಪಿಡ್‌ ಫೈರ್ ಪಿಸ್ತೂಲ್ ವಿಭಾಗದಲ್ಲಿ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು. ಚಾಂಪಿಯನ್‌ಷಿಪ್‌ನ ಒಂಬತ್ತನೇ ದಿನದ ಮುಕ್ತಾಯಕ್ಕೆ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಏಳು ಚಿನ್ನದೊಂದಿಗೆ ಭಾರತ ಒಟ್ಟು 20 ಪದಕಗಳನ್ನು ಗಳಿಸಿದೆ.

ಪುರುಷರ 50 ಮೀಟರ್ಸ್‌ ರೈಫಲ್‌–3 ಪೊಸಿಷನ್‌ ನಲ್ಲಿ ಪ್ರತಾಪ್ ಸಿಂಗ್ ತೋಮರ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗುರುಪ್ರೀತ್ ಸಿಂಗ್, ಶಿವಂ ಶುಕ್ಲಾ, ಫತೇಹ್‌ ಸಿಂಗ್‌ ಧಿಲಾನ್‌, ಸಿ.ಸ್ಯಾಮ್‌ ಜಾರ್ಜ್‌ ಸಾಜನ್‌, ಲಜ್ಜಾ ಗೋಸ್ವಾಮಿ ಮತ್ತು ರಂಜನ ಗುಪ್ತಾ ನಿರಾಸೆಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.