ಒಂಬತ್ತರ ಎಳವೆಯಲ್ಲೇ ಈಜುಕೊಳಕ್ಕಿಳಿದ ಬೆಂಗಳೂರಿನ ಪ್ರತಿಭೆ ಸಂಭವ್ ಆರ್. ಕಡಿಮೆ ಅವಧಿಯಲ್ಲೇ ಸಂಚಲನ ಸೃಷ್ಟಿಸಿರುವ 17ರ ಹರೆಯದ ಈ ಹುಡುಗ, ದೇಶದ ಪ್ರಮುಖ ಈಜುಪಟುವಾಗುವ ಭರವಸೆ ಮೂಡಿಸಿದ್ದಾರೆ. ರಾಜ್ಯ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚುತ್ತಿದ್ದಾರೆ.
ಸಂಭವ್ ತಂದೆ ರಾಮರಾವ್ ಅವರು ಭಾರತೀಯ ಸೇನೆಯಲ್ಲಿ ನಾಯಕ್ಸುಭೇದಾರ್ ಆಗಿದ್ದು, ಮಗನ ಸಾಧನೆಗೆ ಸದಾ ಬೆಂಬಲವಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತರಬೇಕೆಂಬ ಉಮೇದು ಸಂಭವ್ ಅವರದು.
‘ಕ್ರೀಡೆಗಳಲ್ಲಿ ನನಗೆ ಮೊದಲು ಅಷ್ಟೊಂದು ಆಸಕ್ತಿ ಇರಲಿಲ್ಲ. ಅಷ್ಟೊಂದು ಸಶಕ್ತನೂ ಆಗಿರಲಿಲ್ಲ. ಪೋಷಕರ ಪ್ರೋತ್ಸಾಹದಿಂದಾಗಿ ಕ್ರಮೇಣ ಆಸಕ್ತಿ ಚಿಗುರತೊಡಗಿತು. 2016ರಿಂದ ಸ್ಪರ್ಧಾತ್ಮಕ ಈಜುಸ್ಪರ್ಧೆಗಳ ಕಣಕ್ಕಿಳಿಯತೊಡಗಿದೆ. ಅದಕ್ಕೆ ತಕ್ಕಂತೆ ಉತ್ತಮ ತರಬೇತಿಯೂ ದೊರೆಯತೊಡಗಿತು’ ಎನ್ನುತ್ತಾರೆ ಸಂಭವ್.
ಇತ್ತೀಚೆಗೆ ನಡೆದ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನದ ಪದಕಗಳು ಅವರ ಮುಡಿಗೇರಿದ್ದವು.ಇಲ್ಲಿಯವರೆಗೆ ಒಟ್ಟು 23ಕ್ಕಿಂತ ಹೆಚ್ಚು ಪದಕಗಳು ಅವರಿಗೆ ಸಂದಿವೆ. ಸದ್ಯ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ನ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಅವರು ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ರಾಜ್ಯದವರೇ ಆದ, ಒಲಿಂಪಿಯನ್ ಶ್ರೀಹರಿ ನಟರಾಜ್ ಅವರು ಮೂರು ವರ್ಷಗಳ ಹಿಂದೆ ಸ್ಥಾಪಿಸಿದ್ದ ದಾಖಲೆಯನ್ನು ಮೀರಿದ್ದರು. ಸಂಭವ್ ಅವರ ಇನ್ನೊಂದು ನೆಚ್ಚಿನ ವಿಭಾಗ ಬಟರ್‌ಫ್ಲೈ ಆಗಿದೆ.
‘ಕೋವಿಡ್ ನಿಯಂತ್ರಿಸಲು ಹೇರಲಾದ ಲಾಕ್‌ಡೌನ್‌ನಿಂದಾಗಿ ಅಭ್ಯಾಸಕ್ಕೆ ಹೆಚ್ಚು ತೊಂದರೆಯಾಯಿತು. ವರ್ಷಕ್ಕೂ ಹೆಚ್ಚು ಕಾಲ ಈಜುಕೊಳಗಳು ಲಭ್ಯವಿಲ್ಲದ್ದರಿಂದ ತರಬೇತಿ ಸಂಪೂರ್ಣ ನಿಂತುಹೋಗಿತ್ತು. ಜಿಮ್ ಕೇಂದ್ರಗಳೂ ಮುಚ್ಚಿದ್ದರಿಂದ ಫಿಟ್‌ನೆಸ್ ಕಾಯ್ದುಕೊಳ್ಳುವುದು ಸವಾಲಾಗಿತ್ತು. ಆದರೂ ಮನೆಯಲ್ಲೇ ಸಣ್ಣಪುಟ್ಟ ವ್ಯಾಯಾಮಗಳ ಮೂಲಕ ನಿಭಾಯಿಸಿದೆ. ರನ್ನಿಂಗ್‌ಗಳಲ್ಲೇ ಹೆಚ್ಚು ತೊಡಗಿಸಿಕೊಂಡೆ’ ಎಂದರು ಸಂಭವ್.
ಬೆಂಗಳೂರು ಈಜು ಸಂಶೋಧನಾ ಕೇಂದ್ರ (ಬಿಎಆರ್‌ಸಿ) ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಸಂಭವ್ ಅವರಿಗೆ ಮುಖ್ಯ ಕೋಚ್ ಜೈರಾಜ್ ಮಾರ್ಗದರ್ಶನ ನೀಡುತ್ತಿದ್ದಾರೆ.
ಒಲಿಂಪಿಕ್ಸ್ ಪದಕದ ಗುರಿ ಇಟ್ಟುಕೊಂಡಿರುವ ಸಂಭವ್, ಅರ್ಹತೆ ಗಳಿಸುವತ್ತ ನಿರಂತರ ಪ್ರಯತ್ನ ನಡೆಸಿದ್ದೇನೆ ಎನ್ನುತ್ತಾರೆ. ಅಬುಧಾಬಿಯಲ್ಲಿ ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಫಿನಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್ ಅವರ ಮುಂದಿರುವ ಸದ್ಯದ ಪ್ರಮುಖ ಗುರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.