ADVERTISEMENT

ಒಗ್ಗಟ್ಟಿನ ಮನೋಭಾವ ಯಶಸ್ಸು: ಹರ್ಮನ್‌ಪ್ರೀತ್‌

ಪಿಟಿಐ
Published 18 ಸೆಪ್ಟೆಂಬರ್ 2024, 14:01 IST
Last Updated 18 ಸೆಪ್ಟೆಂಬರ್ 2024, 14:01 IST
ಹರ್ಮನ್‌ಪ್ರೀತ್‌ ಸಿಂಗ್‌
ಹರ್ಮನ್‌ಪ್ರೀತ್‌ ಸಿಂಗ್‌   

ನವದೆಹಲಿ: ‘ತಂಡದ ಒಗ್ಗಟ್ಟಿನ ಮನೋಭಾವ ಮತ್ತು ಆಟಗಾರರ ನಡುವಿನ ಉತ್ತಮ ಒಡನಾಟದಿಂದಾಗಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಯಿತು’ ಎಂದು ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

ಜುಗರಾಗ್‌ ಸಿಂಗ್‌ ಗಳಿಸಿದ ಗೋಲಿನ ನೆರವಿನಿಂದ ಮಂಗಳವಾರ ಭಾರತ ತಂಡವು 1–0ರಿಂದ ಆತಿಥೇಯ ಚೀನಾ ತಂಡವನ್ನು ಮಣಿಸಿ, ಐದನೇ ಬಾರಿ ಏಷ್ಯನ್‌ ಚಾಂಪಿಯನ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಹರ್ಮನ್‌ಪ್ರೀತ್‌, ‘ತಂಡದ ಆಟಗಾರರು ಒಬ್ಬರಿಗೊಬ್ಬರು ಪ್ರಾಣಕೊಡಲು ತಯಾರಿದ್ದೇವೆ. ನಮ್ಮ ನಡುವೆ ಅಂತಹ ಬಾಂಧವ್ಯ ಬೆಳೆದಿದೆ. ಇದು ಇತ್ತೀಚೆಗೆ ಯಶಸ್ಸು ಸಾಧಿಸುತ್ತಿರುವುದಕ್ಕೆ ಪ್ರಮುಖ ಕಾರಣ’ ಎಂದಿದ್ದಾರೆ.

ADVERTISEMENT

‘ಫೈನಲ್ ಹಣಾಹಣಿ ನಿಜವಾಗಿಯೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಆತಿಥೇಯ ದೇಶದ ಆಟಗಾರರು ಪಂದ್ಯದುದ್ದಕ್ಕೂ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ, ಗೋಲು ಅವಕಾಶ ಸೃಷ್ಟಿಸುವುದು ನಮಗೆ ಕಷ್ಟವಾಯಿತು’ ಎಂದು ಹಾಕಿ ಇಂಡಿಯಾದ ಪ್ರಕಟಣೆಯಲ್ಲಿ ಹರ್ಮನ್‌ಪ್ರೀತ್ ತಿಳಿಸಿದ್ದಾರೆ.

‘ಕಳೆದ ಒಂದು ವರ್ಷದಿಂದ ತಂಡದಲ್ಲಿ ಒಬ್ಬರಿಗೊಬ್ಬರ ನಡುವೆ ಅಪಾರ ನಂಬಿಕೆ ಬೆಳೆದಿದೆ. ಇದು ಪಂದ್ಯದ ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ’ ಎಂದಿದ್ದಾರೆ.

‘ಕಳೆದ ವರ್ಷ ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ, ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನ ಕಂಚಿನ ಪದಕವು ತಂಡದೊಳಗೆ ಒಗ್ಗಟ್ಟಿನ ಮನೋಭಾವ ಹೆಚ್ಚಿಸಿದೆ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.