ಬೆಂಗಳೂರು: ಉದ್ಯಾನನಗರಿಯಲ್ಲಿ ಮೊದಲ ಸಲ ಕಣಕ್ಕಿಳಿದ ಜೂಲಿಯೆಟ್ ತನ್ನ ‘ಪ್ರಥಮ ಓಟ’ದಲ್ಲಿಯೇ ನೂರಾರು ರೇಸ್‌ಪ್ರೇಮಿಗಳ ಹೃದಯ ಕದ್ದಳು. ಅಲ್ಲದೇ; ರಾಯಲ್ ಏರಿಯನ್ ಕ್ಲಬ್ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್ ಗೆದ್ದಳು!
ಹೌದು. ಆ ವೇಗದ ಸುಂದರಿ, ಏಳು ವರ್ಷದ ಹೆಣ್ಣುಕುದುರೆ. ಪ್ರತಿಷ್ಠಿತ ಇಂಡಿಯನ್ ಟರ್ಫ್ ರೇಸ್‌ನಲ್ಲಿ ಜಾಕಿ ಸಿ.ಎಸ್. ಜೋಧಾ ಅವರ ಅಣತಿಯನ್ನು ಚಾಚೂ ತಪ್ಪದೇ ಪಾಲಿಸಿತು. ಭಾನುವಾರ ಸಂಜೆ ಬೆಂಗಳೂರು ಟರ್ಫ್ ಕ್ಲಬ್ ಟ್ರ್ಯಾಕ್‌ನಲ್ಲಿ ನಡೆದ 2400 ಮೀಟರ್ಸ್ ದೂರದ ಓಟದಲ್ಲಿ ರೋಚಕ ಜಯ ಸಾಧಿಸಿತು. ಎರಡು ನಿಮಿಷ 28.40 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಹೊಸದಾಖಲೆಯನ್ನೂ ನಿರ್ಮಿಸಿತು. 2017ರಲ್ಲಿ ಇಲ್ಲಿ ನಡೆದಿದ್ದ 2400 ಮೀಟರ್ಸ್ ದೂರದ ಓಟದ ರೇಸ್ ಟೆಮೆರಿಟಿ ಅಶ್ವವು ಎರಡು ನಿಮಿಷ 28.85 ಸೆಕೆಂಡ್ಸ್‌ಗಳಲ್ಲಿ ಗೆದ್ದ ದಾಖಲೆಯನ್ನು ಜೂಲಿಯೆಟ್ ಮೀರಿತು.
ವಾರಾಂತ್ಯ ದಿನದಂದು ಬಿಟಿಸಿಯಲ್ಲಿ ಕಿಕ್ಕಿರಿದು ಸೇರಿದ್ದ ರೇಸ್ ಅಭಿಮಾನಿಗಳು ಮತ್ತು ಬೆಟ್ಟಿಂಗ್ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ರೇಸ್‌ನಲ್ಲಿ ಜಾಕಿ ಜೋಧಾ ಅವರ ಚಾಕಚಕ್ಯತೆಗೆ ಸ್ಪಂದಿಸಿದ ಜೂಲಿಯೆಟ್ ಗೆಲುವಿನ ಗುರಿ ಮುಟ್ಟಿತು. ಈ ಸ್ಪರ್ಧೆಯಲ್ಲಿ 11 ಅಶ್ವಗಳು ಇದ್ದವು. ಗೆಲುವಿನ ನೆಚ್ಚಿನ ಕುದುರೆಯಾಗಿ ಕಣಕ್ಕಿಳಿದ ಜೂಲಿಯೆಟ್ ಆರಂಭದಲ್ಲಿ ಮುನ್ನಡೆಯಲ್ಲಿರಲಿಲ್ಲ. ಆದರೆ ಬ್ಲೇಜಿಂಗ್ ಬೇ ಮುನ್ನಡೆ ಸಾಧಿಸಿತು. 1100 ಮೀಟರ್ಸ್‌ಗೆ ಸೂಪರ್ ನ್ಯಾಚುರಲ್ ಮುನ್ನಡೆ ಸಾಧಿಸಿತು. ರೇಸ್ ಮುಕ್ತಾಯಕ್ಕೆ ಕೊನೆಯ 600 ಮೀಟರ್ಸ್ ಉಳಿದಿದ್ದಾಗಲೂ ಜೂಲಿಯೆಟ್ ಎಂಟನೇ ಸ್ಥಾನದಲ್ಲಿತ್ತು. ಕೊನೆಯ 300 ಮೀಟರ್ಸ್‌ನಲ್ಲಿ ಜೂಲಿಯೆಟ್ ವೇಗ ದ್ವಿಗುಣಗೊಳ್ಳುತ್ತ ಹೋಯಿತು. 200 ಮೀಟರ್ಸ್ ಅಂತರ ಉಳಿದಾಗ ಮೊದಲ ಸ್ಥಾನದಲ್ಲಿ ಓಡತೊಡಗಿತು.
ಈ ಹಂತದಲ್ಲಿ ಪಿ.ಎಸ್. ಚೌಹಾಣ್ ಸವಾರಿ ಮಾಡುತ್ತಿದ್ದ ಕಿಂಗ್ ರಾನ್ಸಮ್ ಪೈಪೋಟಿಯೊಡ್ಡಿತು. ಕಡೆಯ ಕ್ಷಣದವರೆಗೂ ದೃತಿಗೆಡದ ಜೂಲಿಯೆಟ್ ಜಾಕಿ ಜೋಧ ಅವರ ಛಲಕ್ಕೆ (¾ ಲೆಂತ್) ಅಲ್ಪ ಅಂತರದಲ್ಲಿ ಜಯ ಒಲಿಯಿತು. ಅದೇ ಕ್ಷಣದಲ್ಲಿ ವೇಗವಾಗಿ ಧಾವಿಸಿದ ಲಾ ರೀನಾ ಕುದುರೆಯು ಸೂಪರ್ ನ್ಯಾಚುರಲ್ ಅನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಿತು.
ಡಾ.ಎಂ.ಎ.ಎಂ.ರಾಮಸ್ವಾಮಿ ಚೆಟ್ಟಿಯಾರ್ ಆಫ್ ಚೆಟ್ಟಿನಾಡ್ ಚಾರಿಟಬಲ್ ಟ್ರಸ್ಟ್ ಒಡೆತನಕ್ಕೆ ಸೇರಿದ ಮಸ್ಕಿಟಿಯರ್ ಗಿಮ್ಮೆಸಮ್‌ಸುಗರ್ ಸಂತತಿಯ ಜೂಲಿಯೆಟ್ ಹೋದ ಸಲವೂ ಪ್ರಶಸ್ತಿ ಜಯಿಸಿತ್ತು. ಈ ಬಾರಿ ₹ 6 ಲಕ್ಷ ಮೌಲ್ಯದ ಸುಂದರ ಕಪ್ ಹಾಗೂ ₹ 60 ಲಕ್ಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟ್ರೇನರ್ ಕಾರ್ತಿಕ್ ಗಣಪತಿ ಅವರ ತರಬೇತಿಯಲ್ಲಿ ಪಳಗಿದೆ.
ನಾರ್ದರ್ನ್ ಲೈಟ್ಸ್‌ಗೆ ಸೂಪರ್ ಮೈಲ್ ಕಪ್: ದಿನದ ಮತ್ತೊಂದು ಆಕರ್ಷಣೆಯಾಗಿದ್ದ ಮೇಜರ್ ಪಿ.ಕೆ. ಮೆಹ್ರಾ ಮೆಮೋರಿಯಲ್ ಸೂಪರ್ ಮೈಲ್ ಕಪ್ ರೇಸ್‌ನಲ್ಲಿ ನಾರ್ದರ್ನ್ ಲೈಟ್ಸ್ ಜಯಭೇರಿ ಬಾರಿಸಿತು. ಪೆಸಿ ಶ್ರಾಫ್ ತರಬೇತಿಯಲ್ಲಿ ಪಳಗಿರುವ ನಾರ್ದರ್ನ್ ಲೈಟ್ಸ್ ಜಯಗಳಿಸಿತು. ಒನ್ಸ್ ಯು ಗೋ ಬ್ಲ್ಯಾಕ್ ಎರಡನೇ ಹಾಗೂ ಅಹೆಡ್ ಆಫ್ ಮೈ ಟೈಮ್ ಮೂರನೇ ಸ್ಥಾನ ಪಡೆಯಿತು. ಬ್ಲ್ಯಾಕ್ ಒನಿಕ್ಸ್ ನಾಲ್ಕನೇ ಸ್ಥಾನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.