ADVERTISEMENT

ಚೆಸ್‌ ಒಲಿಂಪಿಯಾಡ್‌: ಮಿಂಚಿದ ಗುಕೇಶ್‌, ಚೀನಾ ವಿರುದ್ಧ ಭಾರತಕ್ಕೆ ಜಯ

ಪಿಟಿಐ
Published 19 ಸೆಪ್ಟೆಂಬರ್ 2024, 14:56 IST
Last Updated 19 ಸೆಪ್ಟೆಂಬರ್ 2024, 14:56 IST
<div class="paragraphs"><p>ಭಾರತದ ಡಿ.ಗುಕೇಶ್‌ ಮತ್ತು ಚೀನಾದ ವೀ ಯಿ. </p></div>

ಭಾರತದ ಡಿ.ಗುಕೇಶ್‌ ಮತ್ತು ಚೀನಾದ ವೀ ಯಿ.

   

ಚಿತ್ರ: ಫಿಡೆ ವೆಬ್‌ಸೈಟ್‌

ಬುಡಾಪೆಸ್ಟ್‌: ಆರು ಗಂಟೆಗಳ ಸುದೀರ್ಘ ಪಂದ್ಯದಲ್ಲಿ ಡಿ.ಗುಕೇಶ್ ಅವರು ವೀ ಯಿ ಅವರನ್ನು ಸೋಲಿಸಿ ಭಾರತಕ್ಕೆ 45ನೇ ಚೆಸ್‌ ಒಲಿಂಪಿಯಾಡ್‌ನ ಏಳನೇ ಸುತ್ತಿನಲ್ಲಿ ಚೀನಾ ವಿರುದ್ಧ 2.5–1.5 ಗೆಲುವು ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಭಾರತ ಬುಧವಾರ 3–1 ರಿಂದ ಜಾರ್ಜಿಯಾವನ್ನು ಸೋಲಿಸಿತು.

ADVERTISEMENT

ಓಪನ್ ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತ ಅಗ್ರಸ್ಥಾನ ಕಾಪಾಡಿಕೊಂಡಿದೆ. ಇನ್ನು ನಾಲ್ಕು ಸುತ್ತಿನ ಪಂದ್ಯಗಳು ಉಳಿದಿವೆ.

ವೈಶಾಲಿ ರಮೇಶಬಾಬು ಮತ್ತು ವಂತಿಕಾ ಅಗರವಾಲ್‌ ಕ್ರಮವಾಗಿ ಲೆಲಾ ಜವಾಖಿಶ್ವಿಲಿ ಮತ್ತು ಬೇಲಾ ಖೊಟೆನಾಶ್ವಿಲಿ ಅವರನ್ನು ಸೋಲಿಸಿದರು. ದ್ರೋಣವಲ್ಲಿ ಹಾರಿಕಾ ಮತ್ತು ದಿವ್ಯಾ ದೇಶಮುಖ್ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಭಾರತ ಆಡಿದ ಏಳೂ ಸುತ್ತುಗಳಲ್ಲಿ ಜಯಗಳಿಸಿ ಗರಿಷ್ಠ 14 ಪಾಯಿಂಟ್ಸ್ ಶೇಖರಿಸಿದೆ.

ವಿಶ್ವ ಚಾಂಪಿಯನ್‌ಗೆ ಚಾಲೆಂಜರ್ ಆಗಿರುವ ಡಿ.ಗುಕೇಶ್‌, ಏಳನೇ ಸುತ್ತಿನಲ್ಲಿ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. ಪಂದ್ಯ ‘ಡ್ರಾ’ ಆಗಬಹುದು ಎನ್ನುವಾಗ ಅಗ್ರ ಬೋರ್ಡ್‌ನಲ್ಲಿ ಚೀನಾದ ವೀ ಯಿ ಕೊನೆಗಳಿಗೆಯಲ್ಲಿ ಮಾಡಿದ ಒಂದು ತಪ್ಪಿನ ಲಾಭವನ್ನು ಅವರು ಪಡೆದರು. 80ನೇ ನಡೆಯಲ್ಲಿ ವೀ ಪಂದ್ಯ ಬಿಟ್ಟುಕೊಟ್ಟರು.

ಓಪನ್ ವಿಭಾಗದಲ್ಲಿ ಗುಕೇಶ್‌, ಡಿಂಗ್‌ ಲಿರೆನ್ ಅವರನ್ನು ಎದುರಿಸಬೇಕಿತ್ತು. ಆದರೆ ಚೀನಾ ತಂಡದ ‘ಚಿಂತಕರ ಚಾವಡಿ’ ಅವರಿಗೆ ವಿಶ್ರಾಂತಿ ನೀಡಿದ್ದು ಹಲವರ ಹುಬ್ಬೇರಿಸಿತು. ಸಿಂಗಪುರದಲ್ಲಿ ಇವರಿಬ್ಬರು ಈ ವರ್ಷ ವಿಶ್ವ ಚಾಂಪಿಯನ್ ಪಟ್ಟಕ್ಕೆ ಎದುರಾಳಿಗಳಾಗಿದ್ದಾರೆ.

ಪ್ರಜ್ಞಾನಂದ ಬಹುಬೇಗನೇ ಯಾಂಗ್ವಿ ಯು ಜೊತೆ ಡ್ರಾ ಮಾಡಿಕೊಂಡರು. ನಾಲ್ಕನೇ ಬೋರ್ಡ್‌ನಲ್ಲಿ ಪಿ.ಹರಿಕೃಷ್ಣ, ವಾಂಗ್‌ ಯು ವಿರುದ್ಧ ಗೆಲುವಿಗೆ ಸಾಹಸಪಟ್ಟರೂ, ಕೊನೆಗೆ ಪಂದ್ಯ ಸಮಬಲಗೊಂಡಿತು. ಅರ್ಜುನ್ ಇರಿಗೇಶಿ ಆಕ್ರಮಣಕಾರಿ ಆಟವಾಡಿದರೂ, ಎದುರಾಳಿ ಬು ಷಿಯಾಂಗ್ವಿ ಧೃತಿಗೆಡಲಿಲ್ಲ. ಅವರು ನಡೆಗಳ ಪುನರಾವರ್ತನೆ (ಪರ್ಪೆಚುವಲ್ ಚೆಕ್‌) ಮೂಲಕ ಪಂದ್ಯ ‘ಡ್ರಾ’ ಹಾದಿ ಹಿಡಿಯುವಂತೆ ಮಾಡಿದರು. ವಿದಿತ್ ಗುಜರಾತಿ ಈ ಪಂದ್ಯಕ್ಕೆ ವಿಶ್ರಾಂತಿ ಪಡೆದರು.

ಇರಾನ್ 13 ಪಾಯಿಂಟ್ಸ್‌ ಗಳಿಸಿ, ಭಾರತದ ಬೆನ್ನ ಹಿಂದೆಯೇ ಇದೆ. ನಾಲ್ಕು ತಂಡಗಳು– ಸರ್ಬಿಯಾ, ಹಂಗರಿ, ಅರ್ಮೇನಿಯಾ ಮತ್ತು ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ ತಲಾ 12 ಪಾಯಿಂಟ್ಸ್ ಗಳಿಸಿದ್ದು ಮೂರನೇ ಸ್ಥಾನ ಹಂಚಿಕೊಂಡಿವೆ.

ಭಾರತ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು ಎದುರಿಸಲಿದೆ. ಮಹಿಳೆಯರ ವಿಭಾಗದಲ್ಲಿ ಭಾರತದ ಎದುರಾಳಿ, ಪೋಲೆಂಡ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.