ADVERTISEMENT

ರಿಲೇ ಸ್ಪರ್ಧೆ: ಒಲಿಂಪಿಕ್ಸ್‌ಗೆ ಭಾರತ 4x400 ಮೀ. ರಿಲೇ ತಂಡಗಳ ಅರ್ಹತೆ

ನಾಸೌನಲ್ಲಿ ವಿಶ್ವ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 13:05 IST
Last Updated 6 ಮೇ 2024, 13:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಾಸೌ (ಬಹಾಮಾಸ್): ಭಾರತ ಪುರುಷರ ಮತ್ತು ಮಹಿಳಾ 4x400 ಮೀ. ರಿಲೇ ತಂಡಗಳು, ಭಾನುವಾರ ವಿಶ್ವ ಅಥ್ಲೆಟಿಕ್ಸ್ ರಿಲೇ ಕೂಟದಲ್ಲಿ ತಮ್ಮ ವಿಭಾಗದ ಎರಡನೇ ರೌಂಡ್ಸ್‌ ಹೀಟ್ಸ್‌ನಲ್ಲಿ ಎರಡನೇ ಸ್ಥಾನ ಪಡೆದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವು.

ಮಹಿಳಾ ವಿಭಾಗದಲ್ಲಿ ರೂಪಲ್ ಚೌಧರಿ, ಎಂ.ಆರ್‌.ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಮತ್ತು ಶುಭಾ ವೆಂಕಟೇಶನ್ ಅವರನ್ನೊಳಗೊಂಡ ತಂಡ 3 ನಿಮಿಷ 29.35 ಸೆಕೆಂಡಗುಳಲ್ಲಿ ಅಂತರ ಕ್ರಮಿಸಿ ಎರಡನೇ ಸ್ಥಾನ ಪಡೆದವು. ಪ್ರಬಲ ಜಮೈಕಾ ತಂಡ (3ನಿ:28.54 ಸೆ.) ಈ ಹೀಟ್ಸ್‌ನಲ್ಲಿ ಅಗ್ರಸ್ಥಾನ ಪಡೆಯಿತು.

ADVERTISEMENT

ಮುಹಮ್ಮದ್ ಅನಾಸ್‌ ಯಾಹ್ಯಾ, ಮುಹಮ್ಮದ್ ಅಜ್ಮಲ್‌, ಅರೋಕ್ಯ ರಾಜೀವ್ ಮತ್ತು ಅಮೋಜ್ ಜಾಕೋಬ್‌ ಅವರನ್ನೊಳಗೊಂಡ ಪುರುಷರ ತಂಡ ಒಟ್ಟು 3ನಿ.3.23 ಸೆಕೆಂಡುಗಳಲ್ಲಿ ಓಟವನ್ನು ಪೂರೈಸಿತು. ಈ ಹೀಟ್ಸ್‌ನಲ್ಲಿ ಪ್ರಬಲ ಅಮೆರಿಕ ತಂಡ 2ನಿ.59.95 ಸೆ.ಗಳ ಕಾಲಾವಧಿಯೊಡನೆ ಮೊದಲ ಸ್ಥಾನ ಗಳಿಸಿತು.

ಎರಡನೇ ಸುತ್ತಿನ ಮೂರು ಹೀಟ್ಸ್‌ಗಳಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ತಂಡಗಳಿಗೆ ಅರ್ಹತೆ ಅವಕಾಶ ಕಲ್ಪಿಸಲಾಗಿತ್ತು. ಒಲಿಂಪಿಕ್ಸ್‌ ಜುಲೈ 26 ರಿಂದ ಆಗಸ್ಟ್‌ 11 ವರೆಗೆ ನಡೆಯಲಿದೆ. ಆಗಸ್ಟ್‌ 1 ರಿಂದ ಅಥ್ಲೆಟಿಕ್ಸ್‌ ಸ್ಪರ್ಧೆಗಳು ನಿಗದಿಯಾಗಿವೆ.

ಈ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡದ ಮೇಲೆಯೇ ಹೆಚ್ಚಿನ ಲಕ್ಷ್ಯವಿದ್ದು, ಮಹಿಳಾ ತಂಡವೂ ಅರ್ಹತೆ ಪಡೆದಿದ್ದು, ಕೆಲಮಟ್ಟಿಗೆ ಅಚ್ಚರಿ ಮೂಡಿಸಿತು. ಪುರುಷರ ತಂಡ 2020ರ ಟೋಕಿಯೊ ಒಲಿಂಪಿಕ್ಸ್‌ ಮತ್ತು ಅದೇ ವರ್ಷದ ಏಷ್ಯನ್ ಗೇಮ್ಸ್‌ ಚಿನ್ನ ಗೆಲ್ಲುವ ಹಾದಿಯಲ್ಲಿ ಏಷ್ಯನ್ ದಾಖಲೆ ಮುರಿದ ಕಾರಣ ತಂಡದ ಮೇಲೆ ಸಹಜವಾಗಿ ಹೆಚ್ಚಿನ ನಿರೀಕ್ಷೆಗಳಿದ್ದವು.

ಮಹಿಳಾ ತಂಡ ಮೊದಲ ಕ್ವಾಲಿಫೈಯಿಂಗ್‌ ಹೀಟ್ಸ್‌ನಲ್ಲಿ 3ನಿ.29.74 ಸೆ.ಗಳ ಅವಧಿಯೊಡನೆ ಐದನೇ ಸ್ಥಾನ ಗಳಿಸಿತ್ತು.

ಭಾರತ ಮಹಿಳಾ ತಂಡ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಮತ್ತೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದೆ. ಭಾರತ ಮಹಿಳೆಯರು 1984ರ ಲಾಸ್‌ ಏಂಜಲಿಸ್‌ ಗೇಮ್ಸ್‌ನಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಒಟ್ಟಾರೆ ಭಾರತ ಮಹಿಳಾ ರಿಲೇ ತಂಡ ಒಲಿಂಪಿಕ್ಸ್‌ನಲ್ಲಿ  ಭಾಗವಹಿಸುತ್ತಿರುವುದು ಇದು ಎಂಟನೇ ಬಾರಿ.

ರಾಜೇಶ್‌ ರಮೇಶ್‌ ಗಾಯಾಳು:

ಪುರುಷರ ತಂಡ 4x400 ಮೀ. ರಿಲೇ ಓಟದಲ್ಲಿ ಎರಡನೆ ಸುತ್ತಿನ ಹೀಟ್ಸ್‌ನಲ್ಲಿ ಕೊನೆಯ ಲೆಗ್‌ ಓಟಗಾರ ಜಾಕೋಬ್‌ ಕೈಲಿ ಬೇಟನ್ ಸಿಗುವಾಗ ಮೂರನೇ ಸ್ಥಾನದಲ್ಲಿದತ್ತು. ಆದರೆ ಜಾಕೋಬ್ ಅಮೋಘವಾಗಿ ಓಡಿ ಮೆಕ್ಸಿಕೊದ ಸ್ಪರ್ಧಿಯನ್ನು ಹಿಂದೆಹಾಕಿ ಎರಡನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಭಾರತ ತಂಡದ ಓಟಗಾರ ರಾಜೇಶ್ ರಮೇಶ್‌ ಅವರು 4X400 ಮೀ. ಮಿಶ್ರ ರಿಲೇ ಓಟದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದರು. ಇದರಿಂದ ತಂಡ, ಭಾನುವಾರ ನಡೆದ ಮೊದಲ ಸುತ್ತಿನ ಹೀಟ್ಸ್‌ನಿಂದ ಹಿಂದೆ ಸರಿಯಬೇಕಾಯಿತು. ರಮೇಶ್‌ ಅವರು ಪುರುಷರ ರಿಲೆ ತಂಡದ ಜೊತೆಗೆ ಮಿಶ್ರ ರಿಲೆ ತಂಡದಲ್ಲೂ ಓಡಬೇಕಾಗಿತ್ತು. ರಮೇಶ್ ಬದಲಿಗೆ ಪುರುಷರ ತಂಡದಲ್ಲಿ ಆರೋಕ್ಯ ರಾಜೀವ್ ಮೂರನೇ ಲೆಗ್‌ ಓಡಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಮಿಶ್ರ ರಿಲೇ ಓಟ ಪರಿಚಯಿಸಲಾಗಿದ್ದು, ಭಾರತವೂ ಪಾಲ್ಗೊಂಡಿತ್ತು.

ಭಾರತ ಪುರುಷರ 4x400 ಮೀ. ರಿಲೇ ತಂಡ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದೆ. ಸಿಡ್ನಿಯಲ್ಲಿ ನಡೆದ (2000) ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಕಣಕ್ಕಿಳಿದಿತ್ತು.

ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ 19 ಮಂದಿ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಅಥ್ಲೀಟುಗಳು ಅರ್ಹತೆ ಪಡೆದಂತಾಗಿದೆ. ಹಾಲಿ ಜಾವೆಲಿನ್ ಚಾಂಪಿಯನ್ ನೀರಜ್‌ ಚೋಪ್ರಾ ಇವರಲ್ಲಿ ಮುಂಚೂಣಿಯಲ್ಲಿದ್ದಾರೆ.

70 ತಂಡಗಳ ಅರ್ಹತೆ:

ಬಹಾಮಾಸ್‌ನ ರಾಜಧಾನಿ ನೌಸೌನಲ್ಲಿ ನಡೆದ ಈ ಎರಡು ದಿನಗಳ ವಿಶ್ವ ಅಥ್ಲೆಟಿಕ್ಸ್‌ ರಿಲೇ ಕೂಟದಿಂದ ಒಟ್ಟು 70 ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ  ಪಡೆದಿವೆ.

ಇವುಗಳಲ್ಲಿ 4x100 ಮೀ ರಿಲೇ, 4x400 ಮೀ. ರಿಲೇ, 4x400 ಮೀ. ಮಿಶ್ರ ರಿಲೇ ವಿಭಾಗದ ತಂಡಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.